ಮಂಗಳೂರು: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆಯಾಗಿದೆ. ಅವರ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಸೀರಿಯಲ್ ರೀತಿಯಂತಾಗಿದೆ. ಜನರ ದಾರಿ ತಪ್ಪಿಸಲು ಮಹಾರಾಷ್ಟ್ರ ಸಿಎಂ ಬೆಳಗಾವಿ, ಕಾರವಾರ, ನಿಪ್ಪಾಣಿಯೆಲ್ಲಾ ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ಇದೊಂದು ಉದ್ಧಟತನದ ಹೇಳಿಕೆ. ಕನ್ನಡಿಗನಾಗಿ ನಾನು ಮಹಾರಾಷ್ಟ್ರ ಸಿಎಂಗೆ ಸ್ಪಷ್ಟವಾಗಿ ಹೇಳುವುದೇನೆಂದರೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದನ್ನು ಎರಡನೇ ರಾಜಧಾನಿಯೆಂದು ಈಗಾಗಲೇ ನಾವು ಘೋಷಣೆ ಮಾಡಿದ್ದೇವೆ. ಅಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸುತ್ತಿರುವುದು ಅವರಿಗೆ ತಿಳಿದೇ ಇದೆ. ಆ ಮೂರೂ ಪಕ್ಷಗಳ ಹೊಂದಾಣಿಕೆ ತಪ್ಪಿ ಹೋಗಿರುವುದರಿಂದ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮುಂಬೈ ಕರ್ನಾಟಕಕ್ಕೆ ಸೇರಿದ್ದು
ಮುಂಬೈ ಕರ್ನಾಟಕಕ್ಕೆ ಸೇರಿದ್ದು ಎಂಬ ತಮ್ಮ ಹೇಳಿಕೆಗೆ ರಾವತ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ರಾವತ್ ಅವರು ಬೆಳಗಾವಿ, ಕಾರವಾರ, ನಿಪ್ಪಾಣಿಯಲ್ಲಿ ಹೆಚ್ಚು ಮರಾಠಿ ಮಾತನಾಡುವ ಜನರಿದ್ದಾರೆ. ಹಾಗಾಗಿ ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದಾರೆ. ನಾನು ಮುಂಬೈನಲ್ಲಿಯೂ ಬಹಳಷ್ಟು ಮಂದಿ ಕನ್ನಡ ಮಾತನಾಡುವವರಿದ್ದಾರೆ. ಆದ್ದರಿಂದ ಭಾಷೆಯ ಮೇಲೆಯೇ ವಿಭಾಗ ಮಾಡುವುದಾದರೆ ಮುಂಬೈನಲ್ಲಿ ಕನ್ನಡಿಗರು ಜಾಸ್ತಿ ಇದ್ದಾರೆ. ಅದಕ್ಕೆ ಅದನ್ನು ಕರ್ನಾಟಕಕ್ಕೆ ಬಿಟ್ಟುಕೊಡಿ ಎಂದು ಹೇಳಿದ್ದೆ ಎಂದರು.
ನಿಗಮ ಮತ್ತು ಸರ್ಕಾರದಿಂದ ವೇತನ ಪಾವತಿಸಲಾಗಿದೆ
ಕೊರೊನಾ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಸಾರಿಗೆ ಇಲಾಖೆ ಸಂಪೂರ್ಣ ಸ್ತಬ್ಧವಾಗಿತ್ತು. ಆಗ ಸುಮಾರು 650 ಕೋಟಿ ರೂ. ಸರ್ಕಾರದಿಂದ ಪಡೆದುಕೊಂಡು ಎರಡು ತಿಂಗಳ ಸಂಬಳವನ್ನು ಸಾರಿಗೆ ಇಲಾಖೆಯ ಸಿಬ್ಬಂದಿಗೆ ನೂರು ಪ್ರತಿಶತ ನೀಡಲಾಗಿದೆ. ಸಾರಿಗೆ ಇಲಾಖೆ ಆರಂಭವಾದ ಬಳಿಕ ಹಂತ ಹಂತವಾಗಿ ಜನರು ಬಸ್ ಸಂಚಾರ ಆರಂಭಿಸಿದರು. ಆದರೆ ಇಂಧನಕ್ಕೆ ಮತ್ತು ಸಂಬಳ ಕೊಡಲು ಹಣ ಸಾಕಾಗದ ಸಂದರ್ಭದಲ್ಲಿ ಸುಮಾರು ಏಳು ತಿಂಗಳ ಸಂಬಳವನ್ನು 75% ಸರ್ಕಾರದಿಂದ ಹಾಗೂ 25% ನಿಗಮದಿಂದ ಭರಿಸಿ ನವೆಂಬರ್ವರೆಗೆ ಸಂಪೂರ್ಣ ಸಂಬಳ ನೀಡಲಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.