ಮಂಗಳೂರು:ಅಸಹಾಯಕ ಮಹಿಳೆಯ ಮೃತ ಪತಿಯ ಅಂತ್ಯಸಂಸ್ಕಾರವನ್ನು ಎಂ.ಫ್ರೆಂಡ್ಸ್ ಕಾರುಣ್ಯ ತಂಡ ನಡೆಸಿ ಮಾನವೀಯತೆ ಮೆರೆದ ಘಟನೆ ನಿನ್ನೆ ನಗರದಲ್ಲಿ ನಡೆದಿದೆ.
ಭಟ್ಕಳ ಮೂಲದ 39ರ ಹರೆಯದ ಪರಮೇಶ್ವರಿ ಎಂಬುವರ ಪತಿ ಶ್ರೀಧರ್ ಕ್ಯಾನ್ಸರ್ ಮಹಾಮಾರಿಗೆ ತುತ್ತಾಗಿ ನಿನ್ನೆ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಂಬಂಧಿಕರು, ತಮ್ಮವರೆಂದು ಯಾರೂ ಇಲ್ಲದ ಪರಮೇಶ್ವರಿಯವರು ಐಸಿಯು ಹೊರಗಡೆ ದಿಕ್ಕು ತೋಚದೆ, 3 ವರ್ಷದ ಪುಟ್ಟ ಮಗುವಿನೊಂದಿಗೆ ಅಸಹಾಯಕರಾಗಿ ಕುಳಿತು ಅಳುತ್ತಿದ್ದರು.
ಗಂಡನ ಮೃತದೇಹವನ್ನು ಏನು ಮಾಡಬೇಕೆಂದು ತಿಳಿಯದೇ ಮಹಿಳೆಯೊಬ್ಬರು ಅಸಹಾಯಕರಾಗಿದ್ದಾರೆ ಎಂದು ಮಾಹಿತಿ ತಿಳಿದ ತಕ್ಷಣ ಎಂ.ಫ್ರೆಂಡ್ಸ್ ಕಾರುಣ್ಯ ತಂಡ ಆಕೆಯ ಸಹಾಯಕ್ಕೆ ಧಾವಿಸಿತು. ತಕ್ಷಣ 'ಫ್ರೆಂಡ್ಸ್ ಫಾರ್ ಪೂವರ್' ಸಂಸ್ಥೆಯ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ನಂದಿಗುಡ್ಡೆ ಶವಾಗಾರಕ್ಕೆ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ತಲುಪಲಿದೆ ಕೋವಿಡ್ ಲಸಿಕೆ
ಪರಮೇಶ್ವರಿ ಭಟ್ಕಳದವರಾಗಿದ್ದು, ಗಂಡ ಶ್ರೀಧರ್ ದಾವಣಗೆರೆ ಮೂಲದವರು. ಇಬ್ಬರೂ ಕುಂದಾಪುರದಲ್ಲಿ ಕೂಲಿ ಕೆಲಸದಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕಾವಳಕಟ್ಟೆಯಲ್ಲಿನ ತೋಟದ ಕೆಲಸಕ್ಕೆ ಸೇರಿದ್ದರು. ಕಳೆದ ಎಂಟು ತಿಂಗಳಿಂದ ಏನಾದರೂ ತಿಂದರೆ ವಾಂತಿ ಮಾಡುತ್ತಿದ್ದ ಶ್ರೀಧರ್ ಲೋಕಲ್ ವೈದ್ಯರ ಔಷಧ ಸೇವಿಸುತ್ತಾ ಕಾಲ ಕಳೆದರು. ರೋಗ ಉಲ್ಬಣಗೊಂಡಾಗ 2021 ಜನವರಿ 1 ರಂದು ವೆನ್ಲಾಕ್ ಆಸ್ಪತ್ರೆ ಸೇರಿದರು. ರೋಗ ಪರೀಕ್ಷಿಸಿದಾಗ ಶ್ರೀಧರ್ ಗಂಟಲು ಕ್ಯಾನ್ಸರ್ಗೆ ತುತ್ತಾಗಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ಮಧ್ಯಾಹ್ನ ಅವರು ಮೃತಪಟ್ಟಿದ್ದರು. ಸಂಬಂಧಿಕರು ಯಾರೂ ಇಲ್ಲ ಎಂದು ತಿಳಿದ ತಕ್ಷಣ ವೆನ್ಲಾಕ್ ಸಿಬ್ಬಂದಿ ಎಂ.ಫ್ರೆಂಡ್ಸ್ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಯಿತು.