ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ವಲಸೆ ಬಂದು ಜೀವನ ಸಾಗಿಸುತ್ತಿರುವ ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ಮೇಲೆ ತಮ್ಮೂರುಗಳಿಗೆ ತೆರಳಲಾಗದೇ, ಜಿಲ್ಲೆಯಲ್ಲಿಯೂ ಉಳಿದುಕೊಳ್ಳಲಾಗದೇ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಮಂದಿ ಕಾಲ್ನಡಿಗೆಯಲ್ಲೇ ತಮ್ಮ ಮನೆ ಸೇರಿಕೊಂಡರೆ, ಮತ್ತೆ ಕೆಲವರು ಸರ್ಕಾರದ ಸಾಂತ್ವನ ಕೇಂದ್ರದಲ್ಲಿದ್ದಾರೆ.
'ಲಾಕ್‌ಡೌನ್ ತೆರವಾದ್ರೂ ಊರಿಗೆ ಹೋಗೋಕೆ ದುಡ್ಡಿಲ್ಲ; ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ' - ಲಾಕ್‌ಡೌನ್ ಸಮಸ್ಯೆಗಳು
ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಗುರಿಯಾದವರಲ್ಲಿ ವಲಸೆ ಕಾರ್ಮಿಕರು ಪ್ರಮುಖರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಜಿಲ್ಲೆಯ ಶಾಲೆ, ಹಾಸ್ಟೆಲ್ಗಳಲ್ಲಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಲಾಕ್‌ಡೌನ್ ಮುಗಿದ ಬಳಿಕ ಮುಂದೇನು? ಎಂಬ ಚಿಂತೆ ಆ ಕಾರ್ಮಿಕರನ್ನು ಕಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗಾಗಲೇ ಬಹುತೇಕ ವಲಸಿಗರ ನೆರವಿಗೆ ಬಂದಿದೆ. ಸರ್ಕಾರದಿಂದ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ಆದರೂ ಕೂಡಾ ಟ್ರಸ್ಟ್ಗಳು, ಮಸೀದಿಗಳು, ಚರ್ಚ್ಗಳೂ ನೆರವಿಗೆ ಬಂದಿವೆ. ಈಗ ಬ್ಯಾಂಕ್ ಆಫ್ ಬರೋಡಾ ಹಾಗೂ ವಿಜಯ ಬ್ಯಾಂಕ್ ವತಿಯಿಂದ ಊಟ ಒದಗಿಸಲಾಗುತ್ತಿದೆ. ಬೇರೆ ರಾಜ್ಯಗಳ ವಲಸಿಗರೂ ಸೇರಿದಂತೆ ಸುಮಾರು 340ಕ್ಕೂ ಹೆಚ್ಚು ಮಂದಿ ಇಲ್ಲಿ ಬಂದು ಸಿಕ್ಕಿ ಹಾಕಿಕೊಂಡಿದ್ದಾರೆ.
ಲಾಕ್‌ಡೌನ್ ಮುಗಿದ ಮೇಲೆ ಏನು ಮಾಡಬೇಕೆಂದು ಕೂಡಾ ಇಲ್ಲಿನ ಕಾರ್ಮಿಕರಿಗೆ ತೋಚುತ್ತಿಲ್ಲ. ಒಂದು ವೇಳೆ ಊರಿಗೆ ಹೋದ್ರೆ ಅಲ್ಲಿನ ಊರೊಳಗೆ ಇವರನ್ನು ಸೇರಿಸುತ್ತಾರಾ..? ಅನ್ನೋ ಅನುಮಾನವೂ ಕೂಡಾ ಇವರಲ್ಲಿದೆ.