ಮಂಗಳೂರು: ಕೇಂದ್ರ ಸರ್ಕಾರ ದಿವಸಕ್ಕೆ ಒಂದು ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಬೇಕು. ಅದೇ ರೀತಿ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ ಎಂದು ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ದಿನಕ್ಕೆ 1ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಿ: ಕೇಂದ್ರಕ್ಕೆ ಕಾಂಗ್ರೆಸ್ ಮನವಿ - Vaccination news
ಕೇಂದ್ರ ಸರ್ಕಾರ ದಿವಸಕ್ಕೆ ಒಂದು ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಬೇಕು ಎಂದು ಕಾಂಗ್ರೆಸ್ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಿನಕ್ಕೆ 16 ಲಕ್ಷ ನಾಗರಿಕರಿಗೆ ಲಸಿಕೆ ನೀಡುತ್ತಿರುವುದಾಗಿ ಕೇಂದ್ರ ಸರಕಾರ ಹೇಳಿದೆ. ಹಾಗಾದರೆ ದೇಶದ 100 ಕೋಟಿ ಜನತೆಗೆ ಲಸಿಕೆ ನೀಡುವಾಗ ಎಷ್ಟು ಸಮಯವಾಗಬಹುದು. ದೇಶದಲ್ಲಿ ಎರಡು ವ್ಯಾಕ್ಸಿನೇಷನ್ ಆಗಿರುವ ಜನರ ಸಂಖ್ಯೆ ಕೇವಲ ನಾಲ್ಕು ಕೋಟಿ ಅಷ್ಟೇ. ಲಸಿಕೆ ಎಲ್ಲೂ ಸರಿಯಾಗಿ ದೊರಕುತ್ತಿಲ್ಲ. ಜೊತೆಗೆ ಒಂದೊಂದು ಕಡೆ ಒಂದೊಂದು ದರ ನಿಗದಿಯಾಗಿದೆ ಎಂದು ಹೇಳಿದರು.
ದೇಶದ 100 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದರೂ ಕೇಂದ್ರದ ಬೊಕ್ಕಸದಿಂದ ಖರ್ಚು ಆಗುವುದು 65 ಸಾವಿರ ಕೋಟಿ ರೂ. ಈಗ 165 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಹಾಗಾಗಿ ಜನರ ಸ್ವಾಸ್ಥ್ಯಕ್ಕೆ 65 ಸಾವಿರ ಕೋಟಿ ರೂ. ಮುಡಿಪಾಗಿಡೋದು ಸರ್ಕಾರಕ್ಕೆ ದೊಡ್ಡ ವಿಚಾರವೇನಲ್ಲ. ಸರ್ಕಾರ ಲಸಿಕೆ ಹಾಗೂ ಶಿಕ್ಷಣದ ವಿಚಾರದಲ್ಲಿ ಎಡವುತ್ತಿದ್ದು, ಸ್ಪಷ್ಟವಾದ ನಿರ್ಧಾರ ಕೈಗೊಳ್ಳುತ್ತಿಲ್ಲ. ಆದ್ದರಿಂದ ಎರಡೂ ವಿಚಾರಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ಆರು ತಿಂಗಳ ಕಾಲ ಮುಂದೂಡುವುದು ಉತ್ತಮ ಎಂದು ಹರೀಶ್ ಕುಮಾರ್ ಹೇಳಿದರು.