ಮಂಗಳೂರು (ದ.ಕ):ಕಾಡುಹಂದಿಗೆಂದು ಇಟ್ಟ ಉರುಳಿಗೆ ಚಿರತೆಯೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಮುಲ್ಕಿಯ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಹೊಸಕಾಡು ಬರ್ಕೆ ಎಂಬಲ್ಲಿ ನಡೆದಿದೆ.
ಸ್ಥಳಿಯರೊಬ್ಬರಿಗೆ ಸೇರಿದ ಗುಡ್ಡ ಪ್ರದೇಶದಲ್ಲಿ ಈ ಚಿರತೆ ಉರುಳಿಗೆ ಬಿದ್ದು ಸಾವನ್ನಪ್ಪಿದೆ. ಚಿರತೆಯ ಮೃತದೇಹ ಕೊಳೆತು ದುರ್ವಾಸನೆ ಬರುತ್ತಿದ್ದು, ಮೃತಪಟ್ಟು ಕೆಲದಿನಗಳಾಗಿರಬಹುದು ಎಂದು ಶಂಕಿಸಲಾಗಿದೆ.
ಹಂದಿಗಾಗಿ ಇಟ್ಟಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು ಶುಕ್ರವಾರ ಬೆಳಗ್ಗೆ ಸ್ಥಳೀಯರೊಬ್ಬರು ಈ ಪ್ರದೇಶಕ್ಕೆ ತೆರಳಿದ್ದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕೆಮ್ರಾಲ್ ಪಂಚಾಯಿತಿ ಗ್ರಾಮ ಕರಣಿಕ ಸಂತೋಷ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮೂಡುಬಿದಿರೆ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್, ಕಿನ್ನಿಗೋಳಿ ಉಪವಲಯ ಅರಣ್ಯಾಧಿಕಾರಿ ಕೆಸಿ ಮ್ಯಾಥ್ಯೂ, ಮೂಡುಬಿದಿರೆ ರೇಂಜ್ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಕೆಮ್ರಾಲ್ ಪಂಚಾಯಿತಿ ಪಿಡಿಓ ರಮೇಶ್ ರಾಥೋಡ್, ಮುಲ್ಕಿ ಠಾಣಾ ಎಸ್ಐ ಶೀತಲ್ ಅಲಗೂರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಬಟ್ಟಕೋಡಿ, ಮುಲ್ಲೊಟ್ಟು, ಪದ್ಮನ್ನೂರು ಬಳಿಯಲ್ಲಿ ಚಿರತೆ ಹಾವಳಿ ಕಂಡು ಬಂದಿದ್ದು, ಇಲ್ಲಿನ ಅನೇಕ ನಾಯಿಗಳು ಹಾಗೂ ಕೋಳಿಗಳು ಚಿರತೆಗೆ ಬಲಿಯಾಗಿವೆ ಎಂದು ಸ್ಥಳೀಯರಿಂದ ದೂರು ಬಂದಿದ್ದವು. ಈ ಹಿನ್ನೆಲೆ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯಲು ಹೊಸಕಾಡು ಬಾಳಿಕೆ ಎಂಬಲ್ಲಿ ಬೋನ್ ಇರಿಸಿದ್ದರು. ಆದರೆ ಆ ಬಳಿಕ ಚಿರತೆ ಪತ್ತೆಯಾಗಿರಲಿಲ್ಲ. ಇದೀಗ ಚಿರತೆಯ ಮೃತದೇಹ ಪತ್ತೆಯಾಗಿದೆ.