ದಕ್ಷಿಣ ಕನ್ನಡ(ಸವಣೂರು):ಪುತ್ತೂರು ತಾಲೂಕಿನ ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಸಂಪರ್ಕಿಸುವ ಕುಂಡಡ್ಕದಲ್ಲಿ ಗೌರಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಏಕೈಕ ಸೇತುವೆಯೊಂದು ತೀರಾ ಶಿಥಿಲಾವಸ್ಥೆಗೆ ತಲುಪಿದೆ. ಈ ಭಾಗದ ಜನರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ. ಸೇತುವೆಯ ಪಿಲ್ಲರ್ ಶಿಥಿಲವಾಗಿದ್ದು, ಕಿರಿದಾದ ಈ ಸೇತುವೆಯಲ್ಲಿ ಲಘು ವಾಹನಗಳು ಮಾತ್ರ ಚಲಿಸುತ್ತಿವೆ.
ಶಿಥಿಲಾವಸ್ಥೆಯಲ್ಲಿದೆ ಕುಂಡಡ್ಕ ಸೇತುವೆ ಸೇತುವೆಗೆ ಸೂಕ್ತ ತಡೆಗೋಡೆ ಇಲ್ಲದೇ ಮಳೆಗಾಲದಲ್ಲಿ ವಾಹನ ಸವಾರರಿಗೆ, ಪುಟ್ಟ ಮಕ್ಕಳಿಗೆ ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ತುಂಬಿದಾಗ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ಇದೆ. ಈ ಸೇತುವೆಯು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿದೆ. ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ, ಸವಣೂರು, ಪೆರುವಾಜೆ, ಬೆಳಂದೂರು ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡಬಹುದು ಎನ್ನುವುದನ್ನು ಊಹಿಸಲು ಅಸಾಧ್ಯ. ಜತೆಗೆ ಸೇತುವೆಯನ್ನು ಸಂಪರ್ಕಿಸುವ ಬೆಳ್ಳಾರೆ ಜಿ.ಪಂ. ವ್ಯಾಪ್ತಿಗೆ ಬರುವ ಚೆನ್ನಾವರ ಮಸೀದಿ ಬಳಿಯಿಂದ ಹಾಗೂ ಕುಂಡಡ್ಕ ಜಂಕ್ಷನ್ವರೆಗಿನ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ.
ಶಾಸಕರ ಭರವಸೆ
ಈಗಿರುವ ಸೇತುವೆ ಅಗಲ ಕಿರಿದು ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಶಾಸಕ ಎಸ್. ಅಂಗಾರ ಅವರ ಗಮನಕ್ಕೂ ಸಾರ್ವಜನಿಕರು ತಂದಿದ್ದಾರೆ. ಈ ಕುರಿತು ಶಾಸಕರು ಮುಂದಿನ ವರ್ಷದಲ್ಲಿ ಸೇತುವೆ ಹಾಗೂ ಉಳಿದಿರುವ ರಸ್ತೆ ಡಾಂಬರು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲಿನ ಜನತೆಯ ಬೇಡಿಕೆ ಈಡೇರಿಸುತ್ತೇನೆ ಎಂದು ಸಾರ್ವಜನಿಕ ಸಭೆಯಲ್ಲಿ 2 ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರು.
ಒಂದೇ ಪಕ್ಷದ ಜನಪ್ರತಿನಿಧಿಗಳು!
ಈ ಸೇತುವೆಯ ಪ್ರಯೋಜನ ಪಡೆಯುವ ಎರಡು ಗ್ರಾಮಗಳಲ್ಲೂ ಬಿಜೆಪಿ ಜನಪ್ರತಿನಿಧಿಗಳೇ ಇರುವುದು. ಪೆರುವಾಜೆ ಗ್ರಾ.ಪಂ. ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಮೂವರೂ ಬಿಜೆಪಿ ಬೆಂಬಲಿತರು. ಬೆಳ್ಳಾರೆ ಜಿ.ಪಂ. ಕ್ಷೇತ್ರದಲ್ಲೂ ಬಿಜೆಪಿ ಬೆಂಬಲಿತರೇ ಸದಸ್ಯರಿದ್ದಾರೆ. ಸವಣೂರು ಗ್ರಾ.ಪಂ. ವ್ಯಾಪ್ತಿಯ ಪಾಲ್ತಾಡಿ 1ನೇ ವಾರ್ಡ್‌ನಲ್ಲಿ 4 ಮಂದಿಯೂ ಬಿಜೆಪಿ ಬೆಂಬಲಿತರು. ತಾ.ಪಂ., ಜಿ.ಪಂ. ಸದಸ್ಯರೂ ಬಿಜೆಪಿ ಬೆಂಬಲಿತರು. ಸಂಸದ, ಶಾಸಕರೂ ಬಿಜೆಪಿಯವರೇ. ಆದರೆ ಇಲ್ಲಿವರೆಗೂ ಸೇತುವೆ ಅಭಿವೃದ್ಧಿ ಮಾಡಲು ಸಮಯ ಬಂದಿಲ್ಲ.
ಈ ಬಾರಿ ಸೇತುವೆ ನಿರ್ಮಾಣ
ಸೇತುವೆ ನಿರ್ಮಾಣ ಕುರಿತು ಖುದ್ದು ಶಾಸಕ ಎಸ್. ಅಂಗಾರ ಅವರು ಭರವಸೆ ನೀಡಿದ್ದರು, ಆದರೆ ಈವರೆಗೂ ಭರವಸೆ ಈಡೇರಿಲ್ಲ. ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿದೆ. ಮಳೆಗಾಲದಲ್ಲಿ ಅಪಾಯ ಸಂಭವಿಸುವ ಭಯ ಇದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.