ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಪ್ರಸಿದ್ಧ ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿ ನೂತನ ಲಾಂಛನ ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು, ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನವನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮಧ್ಯ ಭಾಗವನ್ನು ಅಲಂಕರಿಸಿದೆ.
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಚಾರ್ಯ ಪುತ್ತೂರು ಅವರು ವ್ರತಾಧಾರಿಯಾಗಿ ಈ ಲಾಂಛನವನ್ನು ಬಿಡಿಸಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲಾಂಛನವನ್ನು ಅನಾವರಣಗೊಳಿಸಿದರು.
ಲಾಂಛನದ ಕೆಳ ಭಾಗದಲ್ಲಿ 'ಅಜೇಯೋಯಂ ವಿಶ್ವಸ್ಯ' ಎಂಬ ವ್ಯಾಖ್ಯೆಯನ್ನು ಕೆತ್ತಲಾಗಿದೆ. ತಾರಕನ ಸಂಹಾರ ಮಾಡಿದ ದೇವಸೇನಾಪತಿಯು ಸೋಲನ್ನರಿಯದ ವಿಶ್ವದೊಡೆಯ ಮತ್ತು ವಿಶ್ವದಲ್ಲಿಯೇ ಜಯಿಸಲಾಗದ ಶಕ್ತಿ ಎಂಬ ಅರ್ಥವನ್ನು ಈ ವ್ಯಾಖ್ಯೆ ಪ್ರತಿಬಿಂಬಿಸುತ್ತದೆ.
ವ್ಯಾಖ್ಯೆಯ ಇಕ್ಕೆಲದಲ್ಲಿ ಷಣ್ಮುಖನ ವಾಹನವಾದ ನವಿಲಿನ ಗರಿಯನ್ನು ಚಿತ್ರೀಕರಿಸಲಾಗಿದೆ. ಅಲ್ಲದೆ ಲಾಂಛನದ ಸುತ್ತಲೂ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಎಂಬ ಕೆತ್ತನೆ ಇದೆ. ಮುಂದೆ ರಥಬೀದಿಯಲ್ಲಿ ನಿರ್ಮಿತವಾಗುವ ಪಾರಂಪರಿಕ ಕಲ್ಲಿನ ಕಟ್ಟಡದಲ್ಲಿ ಲಾಂಛನವನ್ನು ಕಲ್ಲಿನಿಂದ ಕೆತ್ತನೆ ಮಾಡಿ ಅನಾವರಣಗೊಳಿಸಲು ಆಡಳಿತ ಮಂಡಳಿಯು ಚಿಂತನೆ ನಡೆಸಿದೆ. ದೇವಳದ ವೆಬ್‌ಸೈಟ್‌ನಲ್ಲಿ ಇನ್ಮುಂದೆ ಈ ಲಾಂಛನವು ಪ್ರಧಾನವಾಗಿ ಗೋಚರಿಸಲಿದೆ. ಇದರಿಂದಾಗಿ ದೇವಳದ ವೆಬ್‌ಸೈಟ್ ಅನ್ನು ಭಕ್ತರು ಸುಲಲಿತವಾಗಿ ಕಂಡು ಹಿಡಿಯಲು ಸಹಕಾರಿಯಾಗಲಿದೆ.