ಮಂಗಳೂರು:ನಗರದ ಕುದ್ರೋಳಿಯಲ್ಲಿರುವ ಗೋಕರ್ಣನಾಥ ಹಾಗೂ ಪರಿವಾರ ದೇವಾಲಯಗಳು ಬಂಗಾರದ ವರ್ಣದಿಂದ ಕಂಗೊಳಿಸುತ್ತಿದ್ದು, ಇದಕ್ಕೆ ಚೆನ್ನೈನಲ್ಲಿರುವ ದೇವಳವೊಂದು ಪ್ರೇರಣೆ ಎಂದು ಕುದ್ರೋಳಿ ದೇವಸ್ಥಾನದ ಅಭಿವೃದ್ಧಿ ರೂವಾರಿ, ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ, ಅಮೃತಸರ್ ಗುರುನಾನಕ್ ಗೋಲ್ಡನ್ ಟೆಂಪಲ್ ಹಾಗೂ ತಮಿಳುನಾಡಿನ ಚೆನ್ನೈನ ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರಗಳಿವೆ. ಇವುಗಳ ಬಳಿಕ ದೇಶದಲ್ಲಿ ಬಂಗಾರದ ವರ್ಣದಲ್ಲಿ ಶೋಭಿಸುತ್ತಿರುವುದು ಕುದ್ರೋಳಿ ದೇವಸ್ಥಾನ ಮಾತ್ರ ಎಂದರು.
ಚೆನ್ನೈನ ದೇವಸ್ಥಾನದ ಪ್ರೇರಣೆಯಿಂದ ಬಂಗಾರಮಯವಾಯ್ತು ಕುದ್ರೋಳಿ ಗೋಕರ್ಣನಾಥ ದೇವಳ ಚೆನ್ನೈನಲ್ಲಿ ಸ್ವಾಮೀಜಿವೋರ್ವರು ನಿರ್ಮಿಸಿದ ಕೊಳದ ಮಧ್ಯೆಯಿರುವ ಸ್ವರ್ಣಮಂದಿರದಿಂದ ಪ್ರೇರಣೆಗೊಂಡು ಕುದ್ರೋಳಿ ದೇವಸ್ಥಾನವೂ ಬಂಗಾರ ವರ್ಣದಿಂದ ಕಂಗೊಳಿಸಬೇಕೆಂದು ಇಚ್ಛೆ ಪಟ್ಟೆ. ಅದರಂತೆ ಈಗ ಕುದ್ರೋಳಿ ಗೋಕರ್ಣನಾಥ ಹಾಗೂ ಪರಿವಾರ ದೇವಾಲಯವನ್ನು ಬಂಗಾರಮಯವಾಗಿಸುವ ಕೆಲಸ ಸಂಪೂರ್ಣವಾಗಿದೆ ಎಂದು ತಿಳಿಸಿದರು.
ಶಿವರಾತ್ರಿ ಪ್ರಯುಕ್ತ ಈಗ ದೇವಳದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಈ ಸಿದ್ಧತೆ ನಡೆದಿದೆ. ಆದರೆ, ಕುದ್ರೋಳಿ ದೇವಸ್ಥಾನದ ಬಹುದೊಡ್ಡ ಉತ್ಸವ ದಸರಾ ಮಹೋತ್ಸವದ ಕಾರ್ಯಕ್ರಮವನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಸಿದ್ಧತೆ ನಡೆಸಲಾಗಿದೆ ಎಂದು ಜನಾರ್ದನ ಪೂಜಾರಿ ಹೇಳಿದರು.