ಮಂಗಳೂರು:ದ.ಕ ಜಿಲ್ಲೆಯಲ್ಲಿ ಶಾಸಕ ಯು.ಟಿ.ಖಾದರ್ ಕಾಲದಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಹಲ್ಲೆ, ಗೂಂಡಾಗಿರಿ ನಡೆಸುವಂತದ್ದು ಯಥೇಚ್ಛವಾಗಿ ನಡೆಯುತ್ತಿತ್ತು. ಈಗ ಖಾದರ್ ಕಾಲವಲ್ಲ ಎಂಬುದನ್ನು ಅವರು ನೆನಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.
ಶಾಸಕ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಕೊಲೆ ಬೆದರಿಕೆಯೊಡ್ಡಿದವರನ್ನು ಶಿಕ್ಷಿಸುವ ಬದಲಿಗೆ ಸರ್ಕಾರ ಡಿಸಿಯವರಿಗೆ ವರ್ಗಾವಣೆ ಶಿಕ್ಷೆ ನೀಡಿದೆ ಎಂದು ಟ್ವೀಟ್ ಮೂಲಕ ದೂರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ, ಕಾಲ ಕಾಲಕ್ಕೆ ರಾಜ್ಯ ಸರ್ಕಾರ ಮಾಡುವಂತಹ ಸ್ವಾಭಾವಿಕ ವರ್ಗಾವಣೆಯಡಿಯಲ್ಲಿ ಡಿಸಿ ವರ್ಗಾವಣೆ ನಡೆದಿದೆ. ಅದಕ್ಕೆ ರಾಜಕೀಯ ಲೇಪನ ಬಳಸಿ ಖಾದರ್ ಅವರು ವರ್ಗಾವಣೆ ಹಿಂದೆ ರಾಜಕಾರಣ ಇದೆ ಎಂದು ಆಪಾದನೆ ಮಾಡಿರುವುದು ಸರಿಯಲ್ಲ ಎಂದರು.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಅಲ್ಲದೆ ಜಿಲ್ಲಾಧಿಕಾರಿಗೆ ಬೆದರಿಕೆ ಒಡ್ಡಿರುವವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಖಾದರ್ ಅವರು ತಮ್ಮ ಮಾತನ್ನು ವಾಪಸ್ ಪಡೆದುಕೊಳ್ಳಬೇಕು. ಅವರಿಗೆ ಯಾರು ಕೊಲೆ ಬೆದರಿಕೆ ನೀಡಿದ್ದಾರೋ ಅವರ ಮೇಲೆ ಈಗಾಗಲೇ ನಮ್ಮ ಗೃಹ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.