ಮಂಗಳೂರು: ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ವಿನಾಯಕ ಕಾಮತ್ ಕೊಲೆಯಾದ ವ್ಯಕ್ತಿ. ಇವನನ್ನು ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ ಹತ್ಯೆ ಮಾಡಿದ್ದಾರೆ ಎಂದು ವಿನಾಯಕ ಕಾಮತ್ ಪತ್ನಿ ಆರೋಪಿಸಿ ದೂರು ನೀಡಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಘಟನೆ ಹಿನ್ನೆಲೆ:
ವಿನಾಯಕ ಕಾಮತ್ ಮಂಗಳೂರಿನ ಕಾರ್ ಸ್ಟ್ರೀಟ್ ರಸ್ತೆಯ ವೀರ ವೆಂಕಟೇಶ ಅಪಾರ್ಟ್ಮೆಂಟ್ನ 108 ನೇ ಪ್ಲಾಟ್ನಲ್ಲಿ ವಾಸವಿದ್ದರು. ಅಪಾರ್ಟ್ಮೆಂಟ್ ಮುಂಭಾಗದ ಗೇಟ್ ಬಳಿ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಸಿಮೆಂಟ್ ಹಾಕಿ ನಾಲ್ಕೈದು ದಿನಗಳ ಹಿಂದೆ ಸರಿಪಡಿಸಿದ್ದರು. ಇದರ ಮೇಲೆ ಕಾರು ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ನ ಕೃಷ್ಣಾನಂದ ಕಿಣಿ ಅವರು ವಿನಾಯಕ ಕಾಮತ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ದೀಪಾವಳಿ ಪಟಾಕಿ ಸಿಡಿಸುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಮತ್ತೇ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ, ವಿನಾಯಕ ಕಾಮತ್ ಅವರ ಎದೆಗೆ ಚೂರಿಯಿಂದ ಇರಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ವಿನಾಯಕ ಕಾಮತ್ನನ್ನು ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಈ ಕುರಿತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.