ಮಂಗಳೂರು:ಭವಿಷ್ಯದಲ್ಲಿ ಕ್ರೀಡಾಪಟುಗಳು ಒಲಿಂಪಿಕ್ಸ್ ರೀತಿಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲು ಮಂಗಳೂರಿನಲ್ಲಿ 'ಖೇಲೋ ಇಂಡಿಯಾ ತರಬೇತಿ ಕೇಂದ್ರ’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅದರಂತೆ ಮೊದಲ ಹಂತದ ಕಾರ್ಯಗಳು ಈಗಾಗಲೇ ಆರಂಭಗೊಂಡಿದೆ.
'ಒಂದು ಜಿಲ್ಲೆ ಒಂದು ಕ್ರೀಡೆ' ಎಂಬ ಪರಿಕಲ್ಪನೆಯಡಿಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ಮಾಡಲು ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸಲಿದೆ. ತರಬೇತಿ ಕೇಂದ್ರದ ಪ್ರಾರಂಭಕ್ಕೆ ಖರ್ಚು ಹಾಗೂ ಮೂಲಸೌಕರ್ಯಕ್ಕಾಗಿ ಸದ್ಯ 2 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂತಹದ್ದೇ ಕೇಂದ್ರಗಳು ಆರಂಭಿಸಲಾಗಿದ್ದು, ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುವ ಕ್ರೀಡೆಯನ್ನು ತರಬೇತಿ ನೀಡಲಾಗುತ್ತದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರದಲ್ಲಿ ಅಥ್ಲೆಟಿಕ್ ಕ್ರೀಡೆಗೆ ತರಬೇತಿ ನೀಡಲು ಆದೇಶಿಸಲಾಗಿದೆ.
ತರಬೇತಿಗೆ 30 ಕ್ರೀಡಾಪಟುಗಳ ಆಯ್ಕೆ
ತರಬೇತಿಗಾಗಿ ಜಿಲ್ಲೆಯ ವಿವಿಧ ಕಡೆಗಳಿಂದ 30 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶೇ 50ರಷ್ಟು ಬಾಲಕಿಯರು ಮತ್ತು ಶೇ.50ರಷ್ಟು ಬಾಲಕಿಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಆಯ್ಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯು ಸದ್ಯ ಪ್ರಗತಿಯಲ್ಲಿದೆ.