ಮಂಗಳೂರು: ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಉಳ್ಳಾಲ್ತಿ ಅಮ್ಮನವರು ಮತ್ತು ಅಜ್ಜಾವರ ದೈವಗಳ ಭಂಡಾರದ ವಿವಾದಕ್ಕೆ ಸಂಬಂಧಿಸಿದಂತೆ ನಾವು ಸಂಪ್ರದಾಯ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶವು ನಮ್ಮ ಕೈ ಸೇರಿಲ್ಲ ಎಂದು ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸ್ಪಷ್ಟಪಡಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ತಂತ್ರಿ ಶ್ರೀಪತಿ ಭಟ್ ಅವರು, ಬಾಳ್ತಿಲ ಗ್ರಾಮದ ದೈವಗಳ ಭಂಡಾರದ ಮನೆಯಲ್ಲಿ ನಡೆದ ಘಟನೆಯ ಬಳಿಕ, ಈ ವಿಚಾರ ಜೈನ ಮನೆತನ ಹಾಗೂ ಗುತ್ತು ಮನೆತನಗಳ ವಿರುದ್ಧ ಎಂದು ಬಿಂಬಿಸುವ ಪ್ರಯತ್ನವಾಗಿದೆ. ಇದೀಗ ಆರೋಪಿಸಿರುವಂತೆ ಭಂಡಾರವನ್ನು ದೈವಸ್ಥಾನದಲ್ಲಿ ಉಳಿಸಿಕೊಂಡಿಲ್ಲ. ದೈವದ ಭಂಡಾರದ ಮನೆಯಲ್ಲಿ ಉಳಿಸಿಕೊಂಡು ನಿತ್ಯ ಪೂಜೆ ನಡೆಸಲಾಗುತ್ತಿದೆ.
ಕಾಂಪ್ರಬೈಲಿನ ಜೈನಮನೆತನದ ಮನೆಯಲ್ಲಿದ್ದ ಭಂಡಾರವನ್ನು ವಾಪಸು ಕಳುಹಿಸದೇ ದೈವದ ಭಂಡಾರದ ಮನೆಯಲ್ಲಿ ಇರಿಸಿಕೊಳ್ಳುವಂತೆ ತಾಂಬೂಲ ಪ್ರಶ್ನೆಯಲ್ಲಿ ಬಂದ ಸಲಹೆಯಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಕಾಂಪ್ರಬೈಲಿನಿಂದ ಭಂಡಾರ ತರುವ ವೇಳೆಯು ಅಸಮ್ಮತಿ ಸೂಚಿಸಿದ ಕಾಂಪ್ರಬೈಲಿನ ಜೈನಮನೆತನದವರು ದೈವದ ಎದುರಿನಲ್ಲಿ ತಂತ್ರಿಗಳು ಕಾಂಪ್ರಬೈಲಿಗೆ ಬಾರದಂತೆ ಪ್ರಮಾಣ ಮಾಡಿದ್ದಾರೆ ಎಂದರು.