ಮಂಗಳೂರು: ಈ ಬಾರಿ ಕಂಬಳವನ್ನು ಕೊರೊನಾ ಸೋಂಕಿನಿಂದಾಗಿ ಜನವರಿ ಅಂತ್ಯವಾದರೂ ಆರಂಭಿಸಿಲ್ಲ. ಆಯೋಜಕರು ಕೊರೊನಾ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವುದರೊಂದಿಗೆ ಜನವರಿ 30ರಿಂದ ದ.ಕ ಜಿಲ್ಲೆಯಲ್ಲಿ 10 ಕಂಬಳ ಕಾರ್ಯಕ್ರಮವನ್ನು ಏರ್ಪಡಿಸಬಹುದಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇಂದು ದ.ಕ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದರೂಂದಿಗೆ ಆಯೋಜಿಸಬೇಕು. ಕಂಬಳ ಕರಾವಳಿ ಕರ್ನಾಟಕ ಭಾಗದ ಒಂದು ಜಾನಪದ ಕ್ರೀಡೆಯಾಗಿದ್ದು, ಕರಾವಳಿ ಭಾಗದ ರೈತಾಪಿ ಜನರು ನವೆಂಬರ್-ಡಿಸೆಂಬರ್ ಮಾಸದಲ್ಲಿ ಭತ್ತದ ಕೊಯ್ಲಿನ ನಂತರದಿಂದ ಫೆಬ್ರವರಿ-ಮಾರ್ಚ್ವರೆಗೆ ತಮ್ಮ ಮನೋರಂಜನೆಗಾಗಿ ಸಾಂಘಿಕ ಬಲದೂಂದಿಗೆ ಕಂಬಳವನ್ನು ನಡೆಸುತ್ತಾರೆ ಎಂದರು.
ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಮಾತನಾಡಿ, ಕೊರೊನಾ ಸಂದರ್ಭವಾದ ಈ ದಿನಗಳಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸಬೇಕು. ಹೆಚ್ಚು ಜನರು ಸೇರದಂತೆ ಕ್ರಮ ವಹಿಸಬೇಕು. ರಾತ್ರಿ ಹತ್ತು ಗಂಟೆಯ ಒಳಗಾಗಿ ಕಂಬಳ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.