ಕರ್ನಾಟಕ

karnataka

ETV Bharat / city

ಗಾಯಗೊಂಡ ಕಾಲಿನಲ್ಲಿ 14 ಕಲ್ಲುಗಳು.. ಹೊರತೆಗೆಯದೇ ಹೊಲಿಗೆ ಹಾಕಿದ್ರಾ ಕಡಬ ಆಸ್ಪತ್ರೆ ಸಿಬ್ಬಂದಿ!? - ದ ಕ ಜಿಲ್ಲೆಯ ಕಡಬದ ಸಮುದಾಯ ಆಸ್ಪತ್ರೆ

ಗಾಯಗೊಂಡ ಕಾಲಿನಲ್ಲಿ 14 ಕಲ್ಲುಗಳಿದ್ದರೂ ಅವುಗಳನ್ನು ತೆಗೆಯದೇ ಆಸ್ಪತ್ರೆ ಸಿಬ್ಬಂದಿ ಹೊಲಿಗೆ ಹಾಕಿರುವ ಆರೋಪ ಪ್ರಕರಣ ದ.ಕ ಜಿಲ್ಲೆಯ ಕಡಬದ ಸಮುದಾಯ ಆಸ್ಪತ್ರೆಯಲ್ಲಿ ನಡೆದಿದೆ.‌

ಕಲ್ಲುಗಳು, kadaba
ಕಲ್ಲುಗಳು

By

Published : May 7, 2022, 9:01 AM IST

ಕಡಬ(ದಕ್ಷಿಣ ಕನ್ನಡ): ಬೇಜವಾಬ್ದಾರಿ ವಿಚಾರದಲ್ಲಿ ಸದಾ ಸುದ್ದಿಯಾಗುತ್ತಿರುವ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬೈಕ್ ಅಪಘಾತಕ್ಕೆ ಒಳಗಾದ ಗಾಯಾಳುವಿನ ಗಾಯದಲ್ಲಿ ಬರೋಬ್ಬರಿ 14 ಕಲ್ಲುಗಳಿದ್ದರೂ ಅವುಗಳನ್ನು ತೆಗೆಯದೇ ಹೊಲಿಗೆ ಹಾಕಿದ ಪರಿಣಾಮ ಗಾಯ ಉಲ್ಬಣಗೊಂಡು ಇದೀಗ ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಪಡೆಯುವ ಮೂಲಕ ಕಲ್ಲುಗಳನ್ನು ಹೊರತೆಗೆಯಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಘಟನೆ ವಿವರ:ಕಡಬದ ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೆ ಉದ್ಯೋಗಿ ಪುರುಷೋತ್ತಮ ಎಂಬವರು ಏ.25 ರಂದು ಸೋಮವಾರ ರಾತ್ರಿ ತನ್ನ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟಿದ್ದು, ಕೋಡಿಂಬಾಳ ಸಮೀಪದ ಉಂಡಿಲ ಎಂಬಲ್ಲಿ ಅವರ ಸ್ಕೂಟಿ ಸ್ಕಿಡ್ ಆಗಿ ಬಿದ್ದಿದ್ದರು. ಪರಿಣಾಮ ಮೊಣಕಾಲಿಗೆ ಗಾಯವಾಗಿತ್ತು. ಕೂಡಲೇ ಪುರುಷೋತ್ತಮ್ ಹಾಗೂ ಅವರ ಪತ್ನಿಯನ್ನು ಸ್ಥಳೀಯರು ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಬಹುತೇಕ ದಿನಗಳಲ್ಲಿ ಸಂಭವಿಸುವಂತೆ ಈ ವೇಳೆಯೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲ್ಲದೇ ಇರೋದರಿಂದ ಇನ್ನೋರ್ವ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ದಾದಿಯರಿಗೆ ಸೂಚಿಸಿದ್ದರಂತೆ. ಈ ಸಂದರ್ಭದಲ್ಲಿ ದಾದಿಯರು ಹಾಗೂ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಿದ್ದರು. ಬಳಿಕ ಪುರುಷೋತ್ತಮ್ ಹಾಗೂ ಅವರ ಪತ್ನಿ ಮನೆಗೆ ಬಂದಿದ್ದಾರೆ ಎನ್ನಲಾಗ್ತಿದೆ.

ಗಾಯಳು ಪುರುಷೋತ್ತಮ

ಗಾಯ ಉಲ್ಬಣ: ಒಂದು ವಾರದ ಬಳಿಕವೂ ಗಾಯ ಗುಣವಾಗದೇ ನೋವು ಹೆಚ್ಚಾಗಿದ್ದು, ಪುರುಷೋತ್ತಮ್ ಅವರು ಮೇ 4ರಂದು ಕಡಬದ ಖಾಸಗಿ ಡಯಾಗ್ನಸ್ಟಿಕ್ ಸೆಂಟರ್​ವೊಂದರಲ್ಲಿ ಗಾಯದ ಎಕ್ಸರೆ ತೆಗೆಸಿದ್ದರು. ಇದೇ ಸಮಯದಲ್ಲಿ ಆ ಕ್ಲಿನಿಕ್​ನಲ್ಲಿದ್ದ ತಜ್ಞ ವೈದ್ಯರು ಎಕ್ಸರೆ ಪರಿಶೀಲಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುರುಷೋತ್ತಮ್ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಮೇ 4 ರಂದು ರಾತ್ರಿ ಸರ್ಜರಿ ನಡೆಸಲಾಗಿದ್ದು, ಈ ವೇಳೆ ಬರೋಬ್ಬರಿ 14 ಸಣ್ಣ ಕಲ್ಲುಗಳು ದೊರೆತಿವೆಯಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಅಂದು ಸ್ಟಿಚ್ ಮಾಡುವಾಗ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡಿದ್ರೆ ಗಾಯ ಉಲ್ಬಣಗೊಳ್ಳುವ ಪ್ರಮೇಯವೇ ಉಂಟಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ವೈದ್ಯರು ಹಾಗೂ ದ. ಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಸ್ಪಷ್ಟನೆ: ಗಾಯಾಳು ವ್ಯಕ್ತಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವಾಗ ನಾನೇ ಪರಿಶೀಲನೆ ನಡೆಸಿದೆ. ಈ ಸಮಯದಲ್ಲಿ ಹೆಚ್ಚಾಗಿ ರಕ್ತ ಸೋರಿಕೆ ಆಗುತ್ತಿರುವುದರಿಂದ ಅದನ್ನು ತಡೆಯುವ ಸಲುವಾಗಿ ತಾತ್ಕಾಲಿಕ ಔಷಧಿ ಹಚ್ಚಿ, ಒಂದೆರಡು ಸ್ಟಿಚ್ ಹಾಕಿ ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಿಕೊಡುವಂತೆ ಸಿಬ್ಬಂದಿಗೆ ತಿಳಿಸಿದ್ದೆ. ಆದರೆ ಗಾಯಾಳು ವ್ಯಕ್ತಿ ಪುತ್ತೂರಿಗೆ ಹೋಗದೆ ಮನೆಗೆ ಹೋಗಿದ್ದಾರೆ ಅಂತ ಈಗ ತಿಳಿಯಿತು. ನಾವು ಈ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಹೋಗಿದ್ದಾರೆ ಅಂತಲೇ ತಿಳಿದಿದ್ದೆವು. ಆಸ್ಪತ್ರೆಯ ಆ ದಿನದ ದಾಖಲೆಗಳಲ್ಲೂ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ರೆಫರ್ ಮಾಡಿರುವ ದಾಖಲಾತಿ ಇದೆ ಎಂದು ಚಿಕಿತ್ಸೆ ನೀಡಿದ ವೈದ್ಯ ಡಾ. ತ್ರಿಮೂರ್ತಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಹೆಚ್ಒ ಡಾ. ಕಿಶೋರ್ ಕುಮಾರ್, ಮಾಧ್ಯಮಗಳ ಮೂಲಕ ಕಡಬದ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಅಲ್ಲಿನ ವೈದ್ಯಾಧಿಕಾರಿಗಳಿಂದ ತಕ್ಷಣವೇ ಲಿಖಿತವಾಗಿ ವರದಿ ಕೇಳಿದ್ದೇನೆ. ತಪ್ಪು ನಡೆದದ್ದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ಮೂವರು ಮಹಿಳೆಯರು, ಮಗು ಸೇರಿ ಏಳು ಜನ ಸ್ಥಳದಲ್ಲೇ ಸಾವು

ABOUT THE AUTHOR

...view details