ಮಂಗಳೂರು (ದಕ್ಷಿಣಕನ್ನಡ):ಕೊರೊನಾ ಸೋಂಕಿನಿಂದ ಉಂಟಾಗಿರುವ ಸಂಕಷ್ಟವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಜನಸಾಮಾನ್ಯರು ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಸರ್ಕಾರ ನಿಂತಿದೆ. ಇದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ ಎಂದು ಜೆಸಿಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗಳಿಗೆ ಹೆಚ್ಚಿಸುವ ಮೂಲಕ ಮಾಲೀಕರ ಪರವಾಗಿ ನಿಂತಿದೆ. ಈ ಮೂಲಕ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸುವ ಕಾರ್ಯವನ್ನ ಕೇಂದ್ರ ಸರ್ಕಾರ ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ದೀರ್ಘಾವಧಿಯ ಲಾಕ್ಡೌನ್ನಿಂದ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕಳೆದ 45 ವರ್ಷಗಳ ಅವಧಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ನಿರುದ್ಯೋಗ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.