ಮಂಗಳೂರು: ನಗರದ ಸುರತ್ಕಲ್ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ)ಯಲ್ಲಿ ಕಟ್ಟಡಗಳ ಮೇಲಿನ ಮಳೆ ನೀರು ಸಂಗ್ರಹಿಸಿ ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ ಕೊಳ ಹಾಗೂ ಬಾವಿಯಲ್ಲಿ ನೀರು ಶೇಖರಣೆ ಮಾಡುವ ವಿನೂತನವಾದ 'ಜಲಸಂಚಯ ಯೋಜನೆ'ಯನ್ನು ಎನ್ಐಟಿಕೆ ಉಪನಿರ್ದೇಶಕ ಪ್ರೊ.ಅನಂತನಾರಾಯಣ ವಿ.ಎಸ್. ಉದ್ಘಾಟನೆ ಮಾಡಿದರು.
ಎನ್ಐಟಿಕೆಯ 62ನೇ ಸಂಸ್ಥಾಪನಾ ದಿನದ ಪ್ರಯುಕ್ತ ಜಲಸಂಚಯ ಯೋಜನೆಯನ್ನು ಆರಂಭಿಸಲಾಯಿತು. ಜಲಸಂಚಯ ಯೋಜನೆಯಡಿ ಎನ್ಐಟಿಕೆಯ ತ್ರಿಶೂಲ್ (8ನೇ ಬ್ಲಾಕ್) ಹಾಸ್ಟೆಲ್ ಸುತ್ತಮುತ್ತಲಿನ ಅಂತರ್ಜಲ ವೃದ್ಧಿಸಲು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಎನ್ಐಟಿಕೆ ಎದುರಿಸುತ್ತಿರುವ ನೀರಿನ ಅಸಮರ್ಪಕತೆ ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.