ಮಂಗಳೂರು(ದಕ್ಷಿಣ ಕನ್ನಡ): ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ವಿಫಲಗೊಳಿಸುವ ಏಕೈಕ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದೆ ಎಂದು ಐವನ್ ಡಿಸೋಜ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕರ್ಫ್ಯೂ ಮೂಲಕ ಜನಸಾಮಾನ್ಯರಿಗೆ ತೊಂದರೆ ಕೊಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಮೇಕೆದಾಟು ಯೋಜನೆ ಜನತೆಯ ಪರವಾಗಿರುವ ಯೋಜನೆ. ಹಾಗಾಗಿ ಸರ್ಕಾರದ ಈ ತೀರ್ಮಾನವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಜಾರಿಯಾದಲ್ಲಿ ಏಳು ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ಬಹಳಷ್ಟು ಸಹಕಾರಿ ಆಗಲಿದೆ ಎಂಬ ಉದ್ದೇಶವನ್ನಿರಿಸಿಕೊಂಡು ಈ ಪಾದಯಾತ್ರೆ ಮಾಡಲಾಗಿದೆಯೇ ಹೊರತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಈ ಯೋಜನೆಯ ಜಾರಿಗೆ ಪ್ರಕ್ರಿಯೆ ಕಾಂಗ್ರೆಸ್ ಸರ್ಕಾರ ಇರುವಾಗಲೇ ಆರಂಭವಾಗಿತ್ತು. ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದಲ್ಲಿ ಕಳೆದ ಬಾರಿಯೇ ಈ ಯೋಜನೆ ಜಾರಿಗೊಳಿಸಬಹುದಿತ್ತು. ಕಳೆದ ಬಾರಿ ತಮಿಳುನಾಡಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ತಕ್ಷಣ ಮೇಕೆದಾಟು ಯೋಜನೆ ಜಾರಿಯಾಗಲಿ ಎಂದು ಐವನ್ ಡಿಸೋಜ ಆಗ್ರಹಿಸಿದರು.
ಇದನ್ನೂ ಓದಿ:ನನ್ನ ಪ್ರಾಣ ಹೋದ್ರೂ ಚಿಂತೆಯಿಲ್ಲ, ನೀರಿಗಾಗಿ ಹೋರಾಟ ಬಿಡಲ್ಲ: ಡಿ.ಕೆ.ಶಿವಕುಮಾರ್
ಮೇಕೆದಾಟು ಪಾದಯಾತ್ರೆಯನ್ನು ಜ.9 ರಿಂದ 19ರವರೆಗೆ ಕಾಂಗ್ರೆಸ್ ಮಾಡಿಯೇ ಮಾಡುತ್ತದೆ. ರಾಜ್ಯ ಸರ್ಕಾರ ಇದನ್ನು ತಡೆಯುವ ಪ್ರಯತ್ನ ಮಾಡಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಈ ಮೇಕೆದಾಟು ಪಾದಯಾತ್ರೆಗೆ ಕರಾವಳಿಯಿಂದಲೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.