ಮಂಗಳೂರು: ಕೊರೊನಾ ಸೋಂಕಿಗೆ ಸಣ್ಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಪರಿಸ್ಥಿತಿಯಲ್ಲಿ ಶಾಲೆ ಆರಂಭಿಸುವ ಕುರಿತು ಆತುರದ ನಿರ್ಧಾರ ಏಕೆ? ಈ ಕುರಿತು ಶಿಕ್ಷಣ ಸಚಿವ ಸುರೇಶ ಕುಮಾರ್ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸ್ಪಷ್ಟವಾದ ತೀರ್ಮಾನ ಕೈಗೊಳ್ಳುವುದರ ಬದಲು ಗೊಂದಲದ ವಾತಾವರಣ ಸೃಷ್ಟಿಸುತ್ತಿದೆ. ಬೇರೆ ದೇಶಗಳಲ್ಲಿ ಬ್ಯಾಚ್ ಪ್ರಕಾರ ಶಾಲೆಗಳನ್ನು ನಡೆಸುವ ಕಾರ್ಯ ಆರಂಭವಾಗಿದೆ. ತರಗತಿಯಲ್ಲಿ ಮಕ್ಕಳ ಸಂಖ್ಯೆ ಶೇ.30ಕ್ಕಿಂತಲೂ ಕಡಿಮೆಯಿದೆ. ಆದರೂ, ಮಕ್ಕಳಿಗೆ ಸೋಂಕು ತಗುಲಿದೆ. ಆದರೂ ಶಾಲೆ ಆರಂಭಿಸುವ ಅವಸರ ಏಕೆ? ಎಂದು ಪ್ರಶ್ನಿಸಿದರು.
ಕೋವಿಡ್ಗೆ ಬಲಿಯಾಗುವವರು 1-10ರ ಒಳಗಿನ ಹಾಗೂ 60ಕ್ಕಿಂತ ಮೇಲ್ಪಟ್ಟ ವಯಸ್ಸಿನವರು. ಖಾಸಗಿ ಶಾಲೆಗಳ ಮಕ್ಕಳ ಭವಿಷ್ಯ ನಿರ್ಧರಿಸಲು ಸರ್ಕಾರ ಮುಂದಾಗಿದೆ. ಯಾರಿಗೋ ಸಮಾಧಾನ ಮಾಡಲು ಶಾಲೆ ಆರಂಭಿಸಲಾಗುತ್ತಿದೆ. ಒಂದೆರಡು ತಿಂಗಳು ಶಾಲೆ ಆರಂಭಿಸುವುದನ್ನು ಮುಂದೂಡಿದರೆ ಆಗುವ ನಷ್ಟವೇನು? ಎಂದರು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಆನ್ಲೈನ್ ತರಗತಿ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಕೇವಲ ಶೇ.20 ಜನರ ಮನೆಯಲ್ಲಿ ಇಂಟರ್ನೆಟ್ ಇದೆ. ಹಾಗಾದರೆ ಶೇ.80 ವಿದ್ಯಾರ್ಥಿಗಳು ಏನು ಮಾಡೋದು?. ಅಲ್ಲದೇ, ಕೋವಿಡ್ ಪ್ಯಾಕೇಜ್ಗಳಲ್ಲಿ ಶಿಕ್ಷಣಕ್ಕೆ ಹಣ ಮೀಸಲಿಟ್ಟಿಲ್ಲ. ಆನ್ಲೈನ್ ಸಾರ್ವಜನಿಕ ಶಿಕ್ಷಣ ಕೊಡುವಷ್ಟು ಸರ್ಕಾರ ಸನ್ನದ್ಧವಾಗಿಲ್ಲ. ಆದ್ದರಿಂದ ಈಗ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸುವ ಚಿಂತೆಬೇಡ ಎಂದರು.
ಮಳೆ ಆರಂಭವಾದಾಗ ಮಕ್ಕಳಿಗೆ ಶೀತ, ಜ್ವರ ಸಾಮಾನ್ಯ. ಒಂದು ಮಗುವಿಗೆ ಸೋಂಕು ತಗುಲಿದರೂ ಆ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರಾ? ಹೀಗಾಗಿ ಪ್ರೈಮರಿ ಶಾಲೆಯನ್ನು ಆರಂಭಿಸುತ್ತಿಲ್ಲ ಎಂದು ಕೂಡಲೇ ಸರ್ಕಾರ ಪ್ರಕಟಣೆ ಹೊರಡಿಸಲಿ ಎಂದು ಐವಾನ್ ಡಿಸೋಜಾ ಒತ್ತಾಯಿಸಿದರು.