ಮಂಗಳೂರು :ಬೈಕ್ ಅಪಘಾತವೊಂದರ ಗಾಯಾಳುವಿಗೆ ಗಾಯದೊಳಗಿನ ಕಲ್ಲು-ಮಣ್ಣನ್ನು ಸ್ವಚ್ಛಗೊಳಿಸದೆ ಗಾಯಕ್ಕೆ ಹೊಲಿಗೆ ಹಾಕಿರುವ ಕಡಬದ ಸಮುದಾಯ ಆಸ್ಪತ್ರೆ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.
ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿರುವುದು.. ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ನಾನು ಮಾತನಾಡಿದ್ದೇನೆ. ಅವರ ಪ್ರಕಾರ ಅಪಘಾತಕ್ಕೊಳಗಾದ ಗಾಯಾಳುವಿಗೆ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಖಾಸಗಿ ವೈದ್ಯರಲ್ಲಿಗೆ ಹೋಗುವಂತೆ ಸೂಚನೆ ನೀಡಿದ್ದರು. ಆದರೆ, ಆ ಗಾಯಾಳು ಈ ಸೂಚನೆಯನ್ನು ಪಾಲಿಸದೆ ಮನೆಗೆ ತೆರಳಿದ್ದಾರೆ.
ಆದರೆ, ಕೆಲ ದಿನಗಳ ಬಳಿಕ ಗಾಯ ಉಲ್ಬಣಗೊಂಡು ನೋವು ಕಾಣಿಸಿದ ಹಿನ್ನೆಲೆ ಖಾಸಗಿ ವೈದ್ಯರನ್ನು ಭೇಟಿಯಾಗಿದ್ದಾರೆ. ಅಲ್ಲಿ ಎಕ್ಸ್‌ರೇ ಮಾಡಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಗಾಯವಿರುವ ಭಾಗದಲ್ಲಿ ಕಲ್ಲು ಹಾಗೂ ಮಣ್ಣಿನ ಕಣಗಳು ಇದ್ದು, ಅಲರ್ಜಿ ಆಗಿರುವುದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಅಲ್ಲಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯತನವೆಂದು ಕಂಡು ಬಂದಿದೆ.
ಈ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ತಿಳಿಸಿದ್ದೇನೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯವಾಗಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಗಾಯಗೊಂಡ ಕಾಲಿನಲ್ಲಿ 14 ಕಲ್ಲುಗಳು.. ಹೊರತೆಗೆಯದೇ ಹೊಲಿಗೆ ಹಾಕಿದ್ರಾ ಕಡಬ ಆಸ್ಪತ್ರೆ ಸಿಬ್ಬಂದಿ!?