ಪುತ್ತೂರು:ಕೇಂದ್ರ ಸರ್ಕಾರಶ್ರೀಮಂತರನ್ನು ಮತ್ತಷ್ಟು ಸಿರಿವಂತರನ್ನಾಗಿಸುವ ಬಜೆಟ್ ಮಂಡನೆ ಮಾಡುವ ಮೂಲಕ ದೇಶವನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದೆ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಕಿಡಿಕಾರಿದರು.
'ಕೇಂದ್ರ ಬಜೆಟ್ ಬಡವರ ಬದುಕನ್ನ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ..' - 2020 ಬಜೆಟ್ ವಿರುದ್ಧ ಇಕ್ಬಾಲ್ ಬೆಳ್ಳಾರೆ ಪ್ರತಿಕ್ರಿಯೆ
ದೇಶದ ಸಂವಿಧಾನ ಉಳಿಸಲು ಜನತೆ ಬೀದಿಗೆ ಬರಬೇಕಾದ ಸ್ಥಿತಿಯನ್ನ ಕೇಂದ್ರ ಬಿಜೆಪಿ ಸರ್ಕಾರ ತಂದಿದೆ. ಇದರ ಜತೆ ಶ್ರೀಮಂತರನ್ನು ಮತ್ತಷ್ಟು ಸಿರಿವಂತರನ್ನಾಗಿಸುವ ಬಜೆಟ್ ಮಂಡನೆ ಮಾಡುವ ಮೂಲಕ ದೇಶವನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದೆ. ದೇಶದ ಶೇ.80ರಷ್ಟಿರುವ ಬಡ ಮಧ್ಯಮ ವರ್ಗದ ಜನತೆಯ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಎಸ್‌ಡಿಪಿಐ ಜಿಲ್ಲಾ ಪ್ರ. ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆರೋಪಿಸಿದರು.
ನಗರದ ಪುತ್ತೂರು ಬಸ್‌ನಿಲ್ದಾಣದ ಬಳಿ ಸೋಶಿಯಲ್ ಡೆಮೊಕ್ರೆಟಿಕ್ ಆಟೋ ಚಾಲಕರ ಸಂಘದ ವತಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಮೊದಲು ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದಾಗಿ ತಿಳಿಸಿದ್ದ ಬಿಜೆಪಿ ಪಕ್ಷದ ಆಡಳಿತದಲ್ಲಿ ಬೆಲೆ ಏರಿಕೆಯಿಂದ ಜನತೆ ತತ್ತರಿಸುವಂತಾಗಿದೆ.
ತರಕಾರಿಯಿಂದ ಹಿಡಿದು ಗ್ಯಾಸ್ ಸಿಲಿಂಡರ್ ತನಕ ಬೆಲೆಗಳು ಗಗನಕ್ಕೇರಿವೆ. ಜನತೆಯ ಬದುಕು ಸಂಪೂರ್ಣ ಹದಗೆಟ್ಟಿದೆ. ಹಾಗಾಗಿ ದೇಶದ ಜಾತ್ಯಾತೀತ ಪರಂಪರೆಯನ್ನು ಉಳಿಸುವ ಸಲುವಾಗಿ ಜನತೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.