ಪುತ್ತೂರು: ಪೊಲೀಸ್ ಠಾಣೆ ಜನ ಸ್ನೇಹಿ, ಮಾತೃ ಸ್ನೇಹಿ, ಬಾಲ ಸ್ನೇಹಿಯಾಗಬೇಕೆಂಬ ಸರ್ಕಾರದ ಉದ್ದೇಶ ಈಡೇರಿದೆ. ಸಂವಿಧಾನ ನಮ್ಮ ಹಕ್ಕು ಮತ್ತು ಕರ್ತವ್ಯ ನಿರ್ವಹಣೆ ಮಾಡಬೇಕಾದರೆ ಎಲ್ಲಾ ಜನರಿಗೂ ನ್ಯಾಯ ಸಿಗುವಂತಹ ಕಾನೂನು ಇರಬೇಕಾಗುತ್ತದೆ. ನೊಂದವರಿಗೆ ನ್ಯಾಯ ಒದಗಿಸುವ ಕೆಲಸ ಮಹಿಳಾ ಪೊಲೀಸ್ ಠಾಣೆಯಿಂದಲೇ ಆರಂಭವಾಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ಮತ್ತು ಮಹಿಳೆಯರ ಆಪ್ತ ಸಮಾಲೋಚನಾ ಆಸರೆ ಎಂಬ ಕೊಠಡಿಯಲ್ಲಿ 'ಚಿಗುರು, ಚಿಲಿಪಿಲಿ, ಮಡಿಲು' ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜನಿಲ್ಲದ ರಾಜ್ಯ, ಕಾನೂನು ಇಲ್ಲದ ನ್ಯಾಯಾಲಯ ಇರಬೇಕಾದರೆ ಶ್ರೀರಾಮನ ಉದ್ದೇಶದಂತೆ ಅಪರಾಧ ಮುಕ್ತ ಸ್ಟೇಷನ್ ಆಗಬೇಕು. ಇದಕ್ಕಾಗಿ ನಾಗರಿಕರು ಅಪರಾಧ ಮುಕ್ತ ಸಮಜದ ಬಗ್ಗೆ ಚಿಂತನೆ ಮಾಡಬೇಕು. ಸಮಾಜವನ್ನು ಒಂದು ಮಾಡಬೇಕಾದರೆ ಕುಟುಂಬ ಒಂದಾಗಬೇಕು. ಕುಟುಂಬ ಒಂದಾಗಬೇಕಾದರೆ ಅದರಲ್ಲಿನ ಸದಸ್ಯರು ಮೊದಲು ಒಂದಾಗಬೇಕು. ಮಹಿಳಾ ಪೊಲೀಸ್ ಠಾಣೆ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.