ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 'ಜಲಸಿರಿ' ಯೋಜನೆಯಡಿ 24X7 ಕುಡಿಯುವ ನೀರು ಸರಬರಾಜು ವ್ಯವಸ್ಥೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು.
ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸುದ್ದಿಗೋಷ್ಠಿ ಈ ಯೋಜನೆಯನ್ನು ಸುಯೆಜ್ ಪ್ರಾಜೆಕ್ಟ್ (ಪ್ರೈ) ಲಿ. ಗುತ್ತಿಗೆ ಪಡೆದುಕೊಂಡಿದೆ. ಪ್ರಾರಂಭಿಕ ಹಂತದಲ್ಲಿ ನೀರಿನ ಸರಬರಾಜು ಪ್ರಮಾಣ ತಿಳಿಯಲು ನಗರದ ಎಲ್ಲಾ ಮನೆಗಳಿಗೆ ಸುಯೆಜ್ ಕಂಪೆನಿಯ ಸಿಬ್ಬಂದಿ ಭೇಟಿ ಕೊಡಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಪ್ಪದೆ ಎಲ್ಲಾ ವಿವರಗಳನ್ನು ನೀಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸೂಚನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ 60 ವಾರ್ಡ್‌ಗಳ ಪ್ರತಿ ಮನೆಗೆ 24X7 ನಿರಂತರ ಶುದ್ಧ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಲಸಿರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಡಿಸೆಂಬರ್ 24 ರಿಂದ ಸರ್ವೇ ಕಾರ್ಯ ಆರಂಭವಾಗಿದೆ. ಸುಯೆಜ್ ಕಂಪೆನಿಯ ಗುತ್ತಿಗೆ ಅವಧಿಯು 2031 ಆಗಸ್ಟ್ 23 ರಂದು ಕೊನೆಗೊಳ್ಳಲಿದೆ ಎಂದು ಹೇಳಿದರು.
ಸುಯೆಜ್ ಪ್ರಾಜೆಕ್ಟ್ (ಪ್ರೈ) ಲಿ. ಸಿಬ್ಬಂದಿ ಮಂಗಳೂರು ಮ.ನ.ಪಾ ವ್ಯಾಪ್ತಿಯ ನೀರಿನ ಸರಬರಾಜು ಪ್ರಮಾಣವನ್ನು ತಿಳಿಯಲು ನಗರದ ಪ್ರತಿ ಮನೆಗಳು, ವಾಣಿಜ್ಯ ಕಟ್ಟಡಗಳು, ಹೋಟೆಲ್ಗಳು, ಶಾಲೆಗಳು, ಹಾಸ್ಟೆಲ್, ಆಸ್ಪತ್ರೆ, ಚಿತ್ರಮಂದಿರಗಳೂ ಸೇರಿದಂತೆ ಇತರೆ ನೀರು ಬಳಕೆ ಮಾಡುವ ಕಟ್ಟಡಗಳಿಗೆ ಭೇಟಿ ನೀಡಿ, ಕಟ್ಟಡಗಳ ಜನಸಂಖ್ಯೆ, ನೀರಿನ ಮೀಟರ್ ಸಂಖ್ಯೆ, ವಿದ್ಯುಚ್ಛಕ್ತಿಯ ಆರ್.ಆರ್.ಸಂಖ್ಯೆ, ಕಟ್ಟಡದ ಭಾವಚಿತ್ರ ಹಾಗೂ ಇನ್ನಿತರೆ ಮಾಹಿತಿಗಳ ವಿವರಗಳನ್ನು ಡಿಜಿಟಲೀಕರಣ ವ್ಯವಸ್ಥೆಯ ಮೂಲಕ ಸಂಗ್ರಹಿಸುತ್ತಾರೆ. ಅಲ್ಲದೆ ಈ ಸಂದರ್ಭದಲ್ಲಿ ಯೋಜನೆಗೆ ಅವಶ್ಯವಿರುವ ಜಿ.ಐ.ಎಸ್ ಸರ್ವೇ, ಅಸೆಟ್ ಸರ್ವೇ, ರಸ್ತೆ ಸರ್ವೇಗಳನ್ನು ಮಾಡಲಾಗುತ್ತದೆ. ಈ ಸಂದರ್ಭ ಸಾರ್ವಜನಿಕರು ಅವಶ್ಯಕ ಮಾಹಿತಿಗಳನ್ನು ನೀಡಬೇಕೆಂದು ಎಂದು ಮನವಿ ಮಾಡಿದರು.