ಮಂಗಳೂರು: ನಗರದ ನೀರಿನ ಸಮಸ್ಯೆ ಬಿಗಡಾಯಿಸಲು ಮಾಜಿ ಶಾಸಕ ಜೆ ಆರ್ ಲೋಬೋ ಕಾರಣ ಎಮದು ಆರೋಪಿಸಿದ್ದ ಶಾಸಕ ವೇದವ್ಯಾಸ ಕಾಮತ್ ಆರೋಪಕಕ್ಕೆ ಲೋಬೊ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಡಿಬಿ ನೆರವಿನ ಕಾಮಗಾರಿ ಕಳಪೆ ಆಗಿದೆ ಎಂದು ಶಾಸಕ ಕಾಮತ್ ಮಾಡಿರುವ ಆರೋಪಕ್ಕೆ ಇಂದು ಪ್ರತಿಕ್ರಿಯಿಸಿದರು. ಕಾಮಗಾರಿ ಕಳಪೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಕಾಮತ್ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಎಡಿಬಿ ಕಳಪೆಕಾಮಗಾರಿ ಆರೋಪಕ್ಕೆ ಮಾಜಿ ಶಾಸಕ ಲೋಬೊ ತಿರುಗೇಟು ಶಾಸಕ ಕಾಮತ್ ಅವರಿಗೆ ಕಾಮಗಾರಿ ಕಳಪೆ ಎಂದು ಹೇಳಿದವರು ಯಾರು?. ಶಾಸಕರು ತಜ್ಞರೆ?. ಕಾಮಗಾರಿಯನ್ನು ತಜ್ಞರಿಂದ ಸರ್ಕಾರ ಪರಿಶೀಲಿಸಲಿ. ಎಡಿಬಿ ಒಂದನೇ ಯೋಜನೆಯ ಬಗ್ಗೆ ಕಾಮತ್ ಅವರಿಗೆ ಮಾಹಿತಿ ಇಲ್ಲ. ಅರ್ಧಂಬರ್ಧ ಮಾಹಿತಿ ಪಡೆದು ಏನೇನೋ ಮಾತನಾಡುತ್ತಿದ್ದಾರೆ ಎಂದು ಲೋಬೊ ಕುಟುಕಿದರು.
ಕಾಮಗಾರಿ ನಡೆಯುತ್ತಿದ್ದ ವೇಳೆ ಪಾಲಿಕೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಒಂದು ವೇಳೆ ಕಾಮಗಾರಿ ಕಳಪೆ ಎಂದರೆ ಅದಕ್ಕೆ ಆಗಿನ ಬಿಜೆಪಿ ಸರ್ಕಾರ ಹೊಣೆಯಲ್ಲವೇ ಎಂದು ಇದೇ ವೇಳೆ ಲೋಬೊ ಪ್ರಶ್ನಿಸಿದರು.