ಮಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ಸರ್ಕಾರ ಮಾಡುತ್ತಿರುವ ತಾರತಮ್ಯದ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಿ, ಶಿಕ್ಷಕರ ಪರವಾಗಿ ಮಾತನಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅನುದಾನಿತ, ಸರ್ಕಾರಿ ಶಾಲೆಗಳ ನಡುವಿನ ತಾರತಮ್ಯ ಅಧಿವೇಶನದಲ್ಲಿ ಪ್ರಶ್ನಿಸುವೆ: ಐವನ್ ಡಿಸೋಜ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ಸರ್ಕಾರ ಮಾಡುತ್ತಿರುವ ತಾರತಮ್ಯದ ಬಗ್ಗೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಎಲ್ಲರ ಗಮನ ಸೆಳೆಯುವ ಪ್ರಶ್ನೆಗಳನ್ನು ಕೇಳಿ, ಅನುದಾನಿತ ಶಿಕ್ಷಕರ ಪರವಾಗಿ ಮಾತನಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ನಗರದ ಪುರಭವನದಲ್ಲಿ ನಡೆದ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆಯೂ ಪ್ರಾಥಮಿಕ ಶಾಲಾ ಶಿಕ್ಷಕರ ಬಗ್ಗೆ, ಕಾಲ್ಪನಿಕ ವೇತನಗಳ ಬಗ್ಗೆ ವಿಧಾನಸಭೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಶ್ನೆ ಮಾಡಿದ್ದೆ ಎಂದು ಹೇಳಿದರು.
ಅನುದಾನಿತ ಶಾಲೆಗಳ ಬಗ್ಗೆ ಇರುವ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಲೇಬೇಕು. ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳ ನಡುವೆ ಸರ್ಕಾರ ವ್ಯತ್ಯಾಸ ಮಾಡುತ್ತಿದೆ. ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ಸರ್ಕಾರವೇ ನೇಮಕ ಮಾಡುತ್ತದೆ. ಕಾನೂನು, ನಿಯಮಗಳು ಅದೇ ಇರುತ್ತದೆ. ಆದರೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಧ್ಯೆ ಬಹಳಷ್ಟು ತಾರತಮ್ಯ ಮಾಡಲಾಗುತ್ತದೆ. ಪ್ರತಿಯೊಬ್ಬರಿಗೂ ಮಾತೃಭಾಷೆಯಲ್ಲಿಯೇ ಉಚಿತವಾಗಿ ಶಿಕ್ಷಣ, ಮುಂದಿನ ಜೀವನಕ್ಕೆ ದಾರಿಯಾಗಬೇಕು ಎಂಬ ಕಡ್ಡಾಯ ಶಿಕ್ಷಣದ ಉದ್ದೇಶವನ್ನು ಸರ್ಕಾರ ಮರೆತಂತಿದೆ ಎಂದು ಐವನ್ ಡಿಸೋಜ ಹೇಳಿದರು.