ಮಂಗಳೂರು: ಹರೇಕಳದಲ್ಲಿ ಪಿಯುಸಿ ಆರಂಭವಾಗಬೇಕೆಂಬುದು ನನ್ನ ಕನಸಾಗಿದ್ದು, ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ವಿನಂತಿಸಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವರ ಬಳಿ ಕನಸು ಬಿಚ್ಚಿಟ್ಟ ಅಕ್ಷರ ಸಂತ.. ತನ್ನೂರಿಗೆ ಪಿಯು ಕಾಲೇಜು ಬೇಕೆಂದ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಬಂದ ಹರೇಕಳ ಹಾಜಬ್ಬ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿನಂದನೆ ಸಮಾರಂಭದ ಬಳಿಕ ಮಾತನಾಡಿದರು. ಈಗಾಗಲೇ ನನ್ನೂರಿನಲ್ಲಿ ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ಶಾಲೆ ಇದೆ. ಆದರೆ ಪಿಯುಸಿ ಇನ್ನೂ ಆರಂಭವಾಗಿಲ್ಲ. ಪಿಯು ಕಾಲೇಜು ನಿರ್ಮಾಣ ಮಾಡುವುದು ನನ್ನ ಕನಸಾಗಿದೆ. ಇದಕ್ಕಾಗಿ ನಿನ್ನೆ ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ವೇಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳನ್ನು ಹತ್ತಿರದಿಂದ ಕಂಡು ಖುಷಿಪಟ್ಟಿದ್ದೇನೆ. ಬಡವನಾಗಿರುವ ನನ್ನನ್ನು 130 ಕೋಟಿ ಜನರ ನಾಯಕ ಪ್ರಧಾನಮಂತ್ರಿಗಳು ಹತ್ತಿರದಲ್ಲಿ ನಿಂತು ಮಾತನಾಡಿದರು. ಇದು ನನಗೆ ನಿಜಕ್ಕೂ ಖುಷಿ ತಂದಿದೆ. ನನಗೆ ಸಿಕ್ಕಿರುವ ಈ ಗೌರವಗಳೇ ದೊಡ್ಡದು. ನನಗೆ ವೈಯಕ್ತಿಕವಾಗಿ ಏನನ್ನೂ ಕೇಳುವುದಿಲ್ಲ ಎನ್ನುವ ಮೂಲಕ ದೊಡ್ಡತನ ಮೆರೆದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಹರೇಕಳ ಹಾಜಬ್ಬ ಅವರ ಆಸೆಯಂತೆ ಅವರ ಊರಿನಲ್ಲಿ ಪಿಯುಸಿ ಆರಂಭಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಪದ್ಮಶ್ರೀ ಪುರಸ್ಕೃತ ಹಾಜಬ್ಬ ಮಂಗಳೂರಿಗೆ ಆಗಮನ.. ಅಕ್ಷರ ಸಂತನಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ