ಬಂಟ್ವಾಳ: ಭಾನುವಾರ ಸುರಿದ ಜಡಿ ಮಳೆಗೆ ತಾಲೂಕಿನ ಹಲವೆಡೆ ಮನೆ, ತೋಟಗಳಿಗೆ ಹಾನಿಯಾಗಿದ್ದರೆ, ಕೆಲವೆಡೆ ಗುಡ್ಡ ಜರಿದಿದೆ. ಇನ್ನು ಕೆಲವೆಡೆ ವಿದ್ಯುತ್ ಕಂಬಗಳು ಧರಾಶಾಹಿಯಾದರೆ, ರಸ್ತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಸಂಚಾರ ದುಸ್ತರವಾಗಿದೆ.
ಧಾರಾಕಾರ ಮಳೆಗೆ ಗುಡ್ಡ ಜರಿತ, ಮನೆ ಸ್ಥಳಾಂತರ ತಾಲೂಕಿನ ಸಜಿಪಮೂಡ ಗ್ರಾಮದ ನಗ್ರಿ ಎಂಬಲ್ಲಿ ಗುಡ್ಡ ಕುಸಿತಗೊಂಡಿದ್ದು, ಕೂಸಪ್ಪ ನಾಯ್ಕ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಅವರು ಕುಟುಂಬ ಸಮೇತ ನಾವೂರು ಗ್ರಾಮದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಕೂಸಪ್ಪ ಅವರ ಮನೆ ಸಮೀಪದಲ್ಲಿ ಗುಡ್ಡೆ ಕುಸಿತ 100 ಅಡಿಕೆಮರ ಹಾಗು 15 ತೆಂಗಿನ ಮರ ಮಣ್ಣು ಪಾಲಾಗಿವೆ.
ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳಗಿನವಗ್ಗ, ಆಲಂಪುರಿ ಕ್ರಾಸ್ ಬಳಿ ರಸ್ತೆ ಬದಿ ಗುಡ್ಡ ಜರಿದು ಸುಮಾರು 50ಕ್ಕೂ ಅಧಿಕ ಅಡಕೆ ಮರಗಳು ಧರೆಗುರುಳಿವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ರಸ್ತೆ ಬದಿಯ ಗುಡ್ಡವನ್ನು ಅಗೆದಿರುವ ಕಾರಣ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಈಗಾಗಲೇ ರಸ್ತೆ ಇನ್ನೊಂದು ಬದಿಯಲ್ಲಿದ್ದ ಮನೆಯನ್ನು ಹೆದ್ದಾರಿ ಕಾಮಗಾರಿ ವೇಳೆ ತೆರವುಗೊಳಿಸಿದ್ದು, ತೋಟದ ಭಾಗದ ಜಾಗದಲ್ಲಿದ್ದ ಬಂಡೆಯನ್ನು ಒಡೆದು ಹಾಕಲಾಗಿತ್ತು. ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ನಿವಾಸಿ ಸುನೀಲ್ ಪಾಯಸ್ ಅವರಿಗೆ ಸೇರಿದ ಕೃಷಿ ತೋಟದಲ್ಲಿದ್ದ ಅಡಿಕೆ ಮರಗಳು ಗುಡ್ಡ ಸಹಿತ ಪಕ್ಕದ ಮನೆಯಂಗಳಕ್ಕೆ ಬಿದ್ದಿದೆ. ಗುಡ್ಡದ ಪಕ್ಕದಲ್ಲಿದ್ದ ಸುಮಾರು 100 ಕ್ಕಿಂತಲೂ ಅಧಿಕ ಅಡಿಕೆ ಮರಗಳು ನೆಲಸಮವಾಗಿದೆ.