ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಿಂದ ಹೆಸರನ್ನು ತೆಗೆಸುತ್ತೇನೆ ಎಂದು ಹೇಳಿ ಆರೋಪಿಯಿಂದ 2.95 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ ಪಾವೂರು ಗ್ರಾ.ಪಂ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಪಾವೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ರಿಝ್ವಾನ್ (28) ಬಂಧಿತ ಆರೋಪಿ.
2021ರ ಡಿಸೆಂಬರ್ನಲ್ಲಿ ಸುರತ್ಕಲ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ಆರೋಪಿಯನ್ನು ಪೊಲೀಸರು ಹುಡುಕಾಡುತ್ತಿದ್ದರು. ಈ ಸಮಯದಲ್ಲಿ ಆರೋಪಿಯನ್ನು ಅಬ್ದುಲ್ ಖಾದರ್ ರಿಝ್ವಾನ್ ಮತ್ತು ಇನ್ನೋರ್ವ ಸಂಪರ್ಕಿಸಿ, ಪ್ರಕರಣದಿಂದ ಹೆಸರು ತೆಗೆಯಿಸುತ್ತೇವೆ. ಅದಕ್ಕಾಗಿ 3 ಲಕ್ಷ ರೂಪಾಯಿ ಹಣ ನೀಡುವಂತೆ ಕೇಳಿದ್ದರು. ಬಳಿಕ ಆತನಿಂದ ಹಂತ ಹಂತವಾಗಿ ಒಟ್ಟು 2.95 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆ ನಂತರ ಕೂಡ ಪೊಲೀಸರು ತನ್ನನ್ನು ಹುಡುಕುತ್ತಿರುವ ವಿಚಾರ ತಿಳಿದ ದರೋಡೆ ಪ್ರಕರಣದ ಆರೋಪಿ, ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದ.