ಬೆಳ್ತಂಗಡಿ, ದಕ್ಷಿಣ ಕನ್ನಡ :ಬೆಳ್ತಂಗಡಿ ಪೊಲೀಸರು ಸುಮಾರು 71 ಸಾವಿರ ರೂ. ಮೌಲ್ಯದ 2.55 ಕೆ.ಜಿ ಗಾಂಜಾ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಗೇರುಕಟ್ಟೆ ಬಳಿಯ ಪರಪ್ಪು ಎಂಬಲ್ಲಿ ಸೋಮವಾರ 10.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆಗೆ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಗಾಂಜಾ ಸಾಗಾಟ ಬೆಳಕಿಗೆ ಬಂದಿದೆ.
ಆರೋಪಿ ಇಳಂತಿಲ ಗ್ರಾಮ ನೇಜಿಕಾರು ಆಂಬೊಟ್ಟಿನ ಮಹಮ್ಮದ್ ಶಾಫಿ (29) ಎಂಬಾತನ ಬಳಿ ಸುಮಾರು 71,925 ರೂ. ಮೌಲ್ಯದ 2.55 ಕೆ.ಜಿ. ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.