ಮಂಗಳೂರು: ಸರಣಿ ಹಂತಕ ಸೈನೈಡ್ ಮೋಹನ್‌ಗೆ 18ನೇ ಯುವತಿ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ:
2009ರ ಏಪ್ರಿಲ್‌ನಲ್ಲಿ ಕಾಸರಗೋಡಿನ ಪೈವಳಿಕೆ ಗ್ರಾಮದ 27 ವರ್ಷದ ಯುವತಿಯೊಬ್ಬಳನ್ನು ಮೋಹನ್ ಕುಮಾರ್ ಕುಂಬಳೆ ಬಸ್ ನಿಲ್ದಾಣದಲ್ಲಿ ಪರಿಚಯ ಮಾಡಿಕೊಂಡಿದ್ದ. ಆಕೆಯಲ್ಲಿ ತನ್ನ ಹೆಸರು ಸದಾನಂದ ನಾಯ್ಕ ಎಂದು ಹೇಳಿಕೊಂಡಿದ್ದ. ಅಲ್ಲದೆ, ಇಬ್ಬರ ಜಾತಿ ಒಂದೇ ಎಂದು ಹೇಳಿಕೊಂಡು, ಮದುವೆ ಆಗುತ್ತೇನೆಂದು ಪ್ರೀತಿಸುವ ನಾಟಕವಾಡಿದ್ದಾನೆ.
2009ರ ಮೇ 21ರಂದು ಯುವತಿಯನ್ನು ನಂಬಿಸಿ ಮೋಹನ್ ಕುಶಾಲನಗರಕ್ಕೆ ಕರೆದೊಯ್ದು, ಅಲ್ಲಿನ ಲಾಡ್ಜ್‌ನಲ್ಲಿ ರಾತ್ರಿ ಅತ್ಯಾಚಾರ ಎಸಗಿದ್ದ. ಮರುದಿನ ಬೆಳಗ್ಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಆಕೆಯ ಚಿನ್ನಾಭರಣ ಇರಿಸಿ ಹೋಗಿದ್ದ. ಅಲ್ಲಿಂದ ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದ ಮೋಹನ್, ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಅದನ್ನು ಸೇವಿಸಿದ ಯುವತಿ, ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ಬಳಿಕ ಮೋಹನ್ ಲಾಡ್ಜ್‌ಗೆ ತೆರಳಿ ಚಿನ್ನಾಭರಣದಿಂದ ಪರಾರಿಯಾಗಿದ್ದ.
6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಯುವತಿ ಮನೆಯಿಂದ ಹೊರಡುವಾಗ ತಾನು ಪೆರ್ಲದಲ್ಲಿರುವ ಅಜ್ಜಿ ಮನೆಗೆ ಹೋಗುವುದಾಗಿ ತನ್ನ ತಂದೆ-ತಾಯಿಗೆ ಹೇಳಿದ್ದಳು. ಮೂರು ದಿನಗಳಾದರೂ ಆಕೆ ಹಿಂದಿರುಗದ ಕಾರಣ, ಫೋನ್ ಸಂಪರ್ಕಕ್ಕೂ ಸಿಗದಿದ್ದಾಗ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಗಳು ಕಾಣುತ್ತಿಲ್ಲ ಎಂದು ಪ್ರಕರಣ ದಾಖಲಿಸಿದ್ದರು. 2009ರಲ್ಲಿ ಮತ್ತೊಂದು ಪ್ರಕರಣದಲ್ಲಿ ಸೆಪ್ಟಂಬರ್‌ನಲ್ಲಿ ಮೋಹನ್ ಬಂಧಿತನಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಆರೋಪಿ ವಿರುದ್ಧ ಎಷ್ಟು ಪ್ರಕರಣಗಳಿವೆ?
ಮೋಹನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ನ್ಯಾಯಾಧೀಶೆ ಸೈದುನ್ನೀಸಾ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಕೊಲೆ (ಸೆಕ್ಷನ್ 302) ಅಪರಾಧಕ್ಕೆ ಮರಣದಂಡನೆ, ಅತ್ಯಾಚಾರ (ಸೆಕ್ಷನ್ 376) ಪ್ರಕರಣಕ್ಕೆ ಏಳು ವರ್ಷ, ಸೈನೈಡ್ (ಸೆಕ್ಷನ್ 328) ನೀಡಿ ಕೊಲೆ ಮಾಡಿರುವ ಪ್ರಕರಣಕ್ಕೆ 10 ವರ್ಷ, ಅಪಹರಣ (ಸೆಕ್ಷನ್ 366) ಅಪರಾಧಕ್ಕೆ 10 ವರ್ಷ, ಒಡವೆ ದರೋಡೆ (ಸೆಕ್ಷನ್ 392) ಪ್ರಕರಣಕ್ಕೆ 5 ವರ್ಷ, ಸುಲಿಗೆ ಮಾಡುವ ಉದ್ದೇಶದಿಂದ ವಿಷ ಪ್ರಾಶನ ನೀಡಿದ ಪ್ರಕರಣಕ್ಕೆ (394) 10 ವರ್ಷ ಕಠಿಣ ಸಜೆ ನೀಡಿ ತೀರ್ಪು ನೀಡಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮೋಹನ್ ಕುಮಾರ್ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಸರ್ಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಕ್ರಾಸ್ತಾ ವಾದಿಸಿದ್ದರು.