ಕರ್ನಾಟಕ

karnataka

ETV Bharat / city

ಸಾಹಿತ್ಯದ ಮೂಲಕ ಜನರನ್ನು ಸ್ವಾತಂತ್ರ್ಯ ಚಳವಳಿಗೆ ಪ್ರೇರೇಪಿಸಿದವರು ಎನ್ ಎಸ್ ಕಿಲ್ಲೆ - ಸ್ವಾತಂತ್ರ್ಯ ಹೋರಾಟ

ಮುಂಬೈಯಲ್ಲಿದ್ದ ಸರ್ಕಾರಿ ಉದ್ಯೋಗ ತೊರೆದು ಊರಿಗೆ ಬಂದ ಎನ್​ ಎಸ್​ ಕಿಲ್ಲೆ ಅವರು ನಂತರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಜೈಲಲ್ಲಿ ಕುಳಿತು ಸಾಹಿತ್ಯ ರಚಿಸಿದ್ದರು.

Freedom fighter NS Kille
ಸ್ವಾತಂತ್ರ್ಯ ಹೋರಾಟಗಾರ ಎನ್ ಎಸ್ ಕಿಲ್ಲೆ

By

Published : Aug 14, 2022, 12:47 PM IST

ಮಂಗಳೂರು: ಸಹಸ್ರಾರು ಹೋರಾಟಗಾರರ ಭಗೀರಥ ಪ್ರಯತ್ನದ ಫಲವೇ ಭಾರತದ ಸ್ವಾತಂತ್ರ್ಯ. ಈ ಸುದೀರ್ಘ ಹೋರಾಟಕ್ಕೆ ಮುಂಚೂಣಿ ನಾಯಕರ ಜೊತೆಗೆ ಹಲವು ಮಂದಿ ತಮ್ಮ ಕವನ, ಲೇಖನಗಳ ಮೂಲಕ ಪ್ರೇರೇಪಣೆ ಕೊಟ್ಟಿದ್ದರು. ಅಂತಹ ಮಹಾನ್ ಕಾರ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎನ್ ಎಸ್ ಕಿಲ್ಲೆಯವರೂ ಮಾಡಿದ್ದರು.

ಮಂಗಳೂರಿನ ಕೂಳೂರು ಹೊಸಮನೆಯಲ್ಲಿ ಎನ್ ಎಸ್ ಕಿಲ್ಲೆ 1901 ರ ಜನವರಿ 1 ರಂದು ಜನಿಸಿದ್ದರು. ಇವರು 1919 ರಲ್ಲಿ ಉದ್ಯೋಗಕ್ಕಾಗಿ ಮುಂಬೈಗೆ ಹೋಗಿ ಅಲ್ಲಿ‌ ಜನರಲ್ ಪೋಸ್ಟ್ ಆಫೀಸ್​ನಲ್ಲಿ ಉದ್ಯೋಗ ಪಡೆದಿದ್ದರು. 1920ರಲ್ಲಿ ಮುಂಬೈಯ ಚೌಪಾಟಿಯಲ್ಲಿ ಮಹಾತ್ಮ ಗಾಂಧೀಜಿ ಮಾಡಿದ ಭಾಷಣ ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸಿತ್ತು.

ಸ್ವಾತಂತ್ರ್ಯ ಹೋರಾಟಗಾರ ಎನ್ ಎಸ್ ಕಿಲ್ಲೆ

ಸರ್ಕಾರಿ ಉದ್ಯೋಗ ಬಿಟ್ಟು ಊರಿಗೆ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಕಿಲ್ಲೆ ಭಾಗಿಯಾದರು. ಇವರ ಭಾಷಣಗಳು ಜನರನ್ನು ಆಕರ್ಷಿಸುತ್ತಿದ್ದವು. ಮಹಾತ್ಮ ಗಾಂಧೀಜಿ, ನೆಹರು ಅವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಅನುವಾದಕರಾಗಿಯೂ ಭಾಷಣ ಮಾಡಿದ್ದರು. ಅವರ ಅನುವಾದ ಸುಲಭವಾಗಿ ಜನರಿಗೆ ಅರ್ಥವಾಗುವಂತೆ ಇರುತ್ತಿತ್ತು. ಎನ್ ಎಸ್ ಕಿಲ್ಲೆಯವರು ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಜೊತೆಗೆ ಸ್ವಾತಂತ್ರ್ಯ ಚಳವಳಿಗೆ ಜನರನ್ನು ಪ್ರೇರೇಪಿಸುವ ಸಾಹಿತ್ಯ ರಚನೆ ಮಾಡುತ್ತಿದ್ದರು.

ಆಗಿನ ಕಾಲದಲ್ಲೇ ಜೈಲಿನಲ್ಲಿದ್ದುಕೊಂಡು ಅವರು ಬರೆದ ತುಳು ಕವನಗಳು ಜನಪ್ರಿಯವಾಗಿದ್ದವು. 1930ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಜೈಲು ಸೇರಿದ್ದರು. ಬಿಡುಗಡೆ ಆದ ಬಳಿಕ 1932ರಲ್ಲಿ ಮತ್ತೆ ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು. ಗಾಂಧೀಜಿ ಕುರಿತು ಹಾಗು ಹಲವು ಸ್ವಾತಂತ್ರ್ಯ ವಿಷಯಗಳ ಲೇಖನಗಳನ್ನು ಬರೆದು ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೇ ಪ್ರೇರೇಪಿಸುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಎನ್ ಎಸ್ ಕಿಲ್ಲೆ

ಸ್ವಾತಂತ್ರ್ಯಾ ಬಳಿಕವೂ ಗಾಂಧಿವಾದವನ್ನು ಪ್ರಚುರಪಡಿಸಲು ಇವರು 1949ರಲ್ಲಿ ಸರ್ವೋದಯ ವಾರಪತ್ರಿಕೆಯನ್ನು ಕಷ್ಟನಷ್ಟದಲ್ಲಿ ನಡೆಸಿಕೊಂಡು ಬಂದಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ, ಜನರ ಪಾಲ್ಗೊಳ್ಳುವಿಕೆಗೆ ಸಾಹಿತ್ಯವನ್ನು ರಚಿಸಿ ಚಳವಳಿಗೆ ಆಕರ್ಷಿಸಿದ ವಿರಳ ವ್ಯಕ್ತಿಗಳಲ್ಲಿ ಎನ್.ಎಸ್.ಕಿಲ್ಲೆ ಒಬ್ಬರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 6 ವರ್ಷದಲ್ಲಿ (1953 ಮಾರ್ಚ್)ನಲ್ಲಿ ತನ್ನ 52ನೇ ವಯಸ್ಸಿಗೆ ಕ್ಯಾನ್ಸರ್ ರೋಗಪೀಡಿತರಾಗಿ ನಿಧನರಾದರು.

ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಇವರು, ಭಾಷೆ, ಕಲೆ, ಸಮಾಜ ಮತ್ತು ದೇಶಕ್ಕಾಗಿ ನಿರಂತರ ಸೇವೆ ಮಾಡುತ್ತಿದ್ದರು. ಎನ್.ಎಸ್.ಕಿಲ್ಲೆ ಅವರ ಸೋದರಳಿಯ ಕಡಮಜಲು ಸುಭಾಷ್ ರೈ ಅವರು ಈಟಿವಿ ಭಾರತ ಜೊತೆಗೆ ‌ಮಾತನಾಡಿ, "ಕಿಲ್ಲೆಯವರ ಸಾಹಿತ್ಯ ಪ್ರೇಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನಮಾನಸಕ್ಕೆ ತುಂಬಾ ಪ್ರಚೋದನಕಾರಿಯಾಗಿತ್ತು. ಜೈಲಿನಲ್ಲಿ ಬರೆದ ಕವಿತೆಯನ್ನು ಅವರು ಸೆರೆಮನೆಯಿಂದ ಹೊರಬಂದ ಬಳಿಕ ಸಭೆಯಲ್ಲಿ ಹಾಡುತ್ತಿದ್ದರು. ಅದು ಜನರನ್ನು ಮುಟ್ಟುತ್ತಿತ್ತು" ಎಂದು ಹೇಳಿದರು.

ಇದನ್ನೂ ಓದಿ:ಸಾವಿರಾರು ಮಕ್ಕಳಿಗೆ ಆಸರೆ ಗಾಂಧಿ ಅಡಿಪಾಯ ಹಾಕಿದ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ

ABOUT THE AUTHOR

...view details