ಮಂಗಳೂರು: ಮಕ್ಕಳಾಗದೇ ಇರುವ ದಂಪತಿ ಮಕ್ಕಳು ಬೇಕೆಂದು ಚಿಕಿತ್ಸೆಗಾಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಆದರೆ, ಮಂಗಳೂರಿನಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಉಚಿತ ಚಿಕಿತ್ಸೆ ಮೂಲಕ ಮಕ್ಕಳಾಗದವರಿಗೆ ಮಕ್ಕಳನ್ನು ಕರುಣಿಸುವ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನ ಸೃಷ್ಟಿ ಸಂಸ್ಥೆಯ ಚಿಕಿತ್ಸೆ ಮೂಲಕ ಎರಡು ಮಕ್ಕಳ ಜನನವಾಗಿದೆ.
ಮಂಗಳೂರಿನ ಯೆನೆಪೋಯ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಆಶ್ರಯದಲ್ಲಿ ಸೃಷ್ಟಿ ಹೋಮಿಯೋಪಥಿಕ್ ಫರ್ಟಿಲಿಟಿ ಕೇರ್ ಎಂಬ ಸಂಸ್ಥೆ ಈ ಸಾಧನೆ ಮಾಡಿದೆ. 2019ರಲ್ಲಿ ಆರಂಭವಾದ ಈ ಸಂಸ್ಥೆ ನೀಡಿದ ಹೋಮಿಯೋಪತಿ ಚಿಕಿತ್ಸೆ ಮೂಲಕ ಎರಡು ಮಕ್ಕಳ ಜನನವಾಗಿದೆ.
ಮಕ್ಕಳಿಲ್ಲದ 42 ದಂಪತಿ ಸಂತಾನೋತ್ಪತ್ತಿಗಾಗಿ ಸೃಷ್ಟಿ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಇದರಲ್ಲಿ 15 ಮಂದಿಗೆ ಚಿಕಿತ್ಸೆ ಮುಂದುವರಿಸಿದ್ದು, 4 ಮಂದಿಗೆ ಚಿಕಿತ್ಸೆ ಫಲಕಾರಿಯಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ನಾಲ್ಕು ಮಂದಿಯಲ್ಲಿ ಎರಡು ಮಕ್ಕಳ ಜನನವಾಗಿದೆ. ಮೊದಲ ಮಗು 2020 ನವೆಂಬರ್ 28ರಂದು ಜನಿಸಿದ್ದು, ಎರಡನೇ ಮಗು 2021 ಅಕ್ಟೋಬರ್ 12ರಂದು ಜನಿಸಿದೆ. ಎರಡೂ ಮಕ್ಕಳು ಸಂಪೂರ್ಣ ಆರೋಗ್ಯದಿಂದಿವೆ.