ಮಂಗಳೂರು:ನಗರದ ಮಂಗಳಾದೇವಿ ದೇವಳದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ನಡೆದಿರುವ ನಾಲ್ಕು ಜೋಡಿಯ ಮದುವೆಗೆ ಸಂಬಂಧಿಸಿದಂತೆ, ಅಧಿಕಾರಿಗಳು ಹಾಗೂ ದೇವಳದ ಆಡಳಿತ ಸಮಿತಿಯ ವಿರುದ್ಧವೂ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಓದಿ: ದೇವರ ಹೆಸರಲ್ಲಿ ಅಪ್ರಾಪ್ತೆಗೆ ತಾಳಿಕಟ್ಟಿದ ಚರ್ಚ್ 'ಫಾದರ್': ಪ್ರಕರಣ ದಾಖಲು..!
ಭಾನುವಾರ ಬೆಳಗ್ಗೆ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಮತ್ತು ಮನಪಾ ಕಂದಾಯ ಇಲಾಖೆಯ ಉಪ ಆಯುಕ್ತ ಬಿನೋಯ್ ಸೇರಿದಂತೆ ಅಧಿಕಾರಿಗಳು ದಾಳಿ ನಡೆಸಿ ಮದುವೆಯನ್ನು ನಿಲ್ಲಿಸಿದ್ದರು.
ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಒಂದೇ ಕಡೆಯಲ್ಲಿ ನಾಲ್ಕು ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಮನಪಾ ಆರೋಗ್ಯ ಅಧಿಕಾರಿಗಳು ಹಾಗೂ ದೇವಾಲಯದ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ ಮದುವೆ ಕಾರ್ಯಕ್ರಮ ಆಯೋಜಿಸಿರುವ ಕುಟುಂಬಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.