ಕರ್ನಾಟಕ

karnataka

ETV Bharat / city

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್​​ಗೆ ವಂಚಿಸುತ್ತಿದ್ದ ಜಾಲ ಪತ್ತೆ: ನಾಲ್ವರ ಬಂಧನ - bank fraud case in Mangaluru

ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮಾಲೀಕರ ಹೆಸರಿನಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಉತ್ತರ ಉಪ ವಿಭಾಗದ ವಿಶೇಷ ಅಪರಾಧ ಪತ್ತೆ ದಳ ಮತ್ತು ‘ಇ ಆ್ಯಂಡ್ ಎನ್‌ಸಿಪಿಎಸ್’ ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಆರೋಪಿಗಳ ಬಂಧನ

By

Published : Aug 25, 2019, 7:44 PM IST

ಮಂಗಳೂರು: ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಮಂಗಳೂರು ಉತ್ತರ ಉಪ ವಿಭಾಗದ ವಿಶೇಷ ಅಪರಾಧ ಪತ್ತೆ ದಳ ಮತ್ತು ‘ಇ ಆ್ಯಂಡ್ ಎನ್‌ಸಿಪಿಎಸ್’ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪಾಂಡೇಶ್ವರ ಮಂಗಳಾದೇವಿ ದೇವಸ್ಥಾನ ಬಳಿ ನಿವಾಸಿ ಗೋವರ್ಧನ್ (34), ಬಜ್ಪೆ ಭಟ್ರಕೆರೆ ನಿವಾಸಿ ಮುಹಮ್ಮದ್ ಅನ್ವರ್ ಅಲಿಯಾಸ್​ ಭಸ್ಮ ಅನ್ವರ್ (44), ಬಂಟ್ವಾಳ ತಾಲೂಕಿನ ತುಂಬೆ ನಿವಾಸಿ ನೌಷಾದ್ ಅಲಿಯಾಸ್​​ ನೌಷಾದ್ ಹುಸೈನ್ (36), ಮಂಗಳೂರಿನ ಕದ್ರಿ ಶಿವಭಾಗ್ ನಿವಾಸಿ ಉಮರ್ ಫಾರೂಕ್ ಅಲಿಯಾಸ್ ಆರ್‌ಟಿಒ ಉಮರ್ (51) ಬಂಧಿತ ಆರೋಪಿಗಳು.

ವಂಚನ ಜಾಲವು ವಾಹನ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ಸಾಲ ಪಡೆದು ವಂಚನೆ ಮಾಡುತ್ತಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮಾಲೀಕರ ಹೆಸರಿನಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದರು. ಬಳಿಕ ಖಾತೆಗಳಿಗೆ ಸಾಲದ ಮೊತ್ತ ವರ್ಗಾವಣೆ ಮಾಡಿಸಿಕೊಂಡು ಹಂಚಿಕೊಳ್ಳುತ್ತಿದ್ದರು. ಆರೋಪಿಗಳು ಬ್ಯಾಂಕ್ ಮತ್ತು ವಾಹನ ಮಾಲೀಕರಿಗೆ ಸುಮಾರು 45 ಲಕ್ಷ ರೂ. ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆ. 21ರಂದು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ ಆರ್. ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಜಂಟಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ‘ಇ ಆ್ಯಂಡ್ ಎನ್‌ಸಿಪಿಎಸ್’ ಠಾಣೆಗೆ ಹಸ್ತಾಂತರಿಸಲಾಗಿದೆ.

ABOUT THE AUTHOR

...view details