ಮಂಗಳೂರು :ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿನ ಬೆಡ್ಗಳು, ವೆಂಟಿಲೇಟರ್ ಭರ್ತಿಯಾಗಿದ್ದು, ಪ್ರಸ್ತುತ ಸೋಂಕಿತರನ್ನು ಜಿಲ್ಲಾಡಳಿತ ಯಾವ ಆಸ್ಪತ್ರೆಗಳಿಗೆ ಕಳುಹಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಎಷ್ಟು ಬೆಡ್ಗಳು ಲಭ್ಯವಿದೆ ಎಂದು ಡಿಹೆಚ್ಒ, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಡಲಿ ಎಂದು ಮಾಜಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ಗಳು ಖಾಲಿಯಿವೆ ಎಂಬ ಅಂಕಿಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಜಿಲ್ಲಾಡಳಿತ ಮಾಹಿತಿ ನೀಡಬೇಕು. ಈ ಬಗ್ಗೆ ಪತ್ರಿಕಾ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ರೋಗಿಗಳನ್ನು ನಿರ್ಲಕ್ಷ್ಯ ಮಾಡಿದಂತಾಗಲಿದೆ. ನಿಮ್ಮ ಆರೋಗ್ಯ ಸಚಿವರು ಕೊರೊನಾದಿಂದ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದಿದ್ದಾರೆ. ಆದರೆ, ಸರ್ಕಾರದ ಪ್ರಯತ್ನ ಬೇಡವೇ? ಎಂದು ಪ್ರಶ್ನಿಸಿದ ಅವರು, ಇದರಿಂದ ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ಭಯ ಇಮ್ಮಡಿಯಾಗುತ್ತದೆ ಎಂದರು.