ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿ ಎಂಬಲ್ಲಿ ಉರುಳಿಗೆ ಸಿಲುಕಿದ್ದ ಚಿರತೆಯೊಂದನ್ನು ಬಂಟ್ವಾಳದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿದ್ದಾರೆ.
ಶುಕ್ರವಾರ ತಡರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸುತ್ತ ಮನೆಗಳು ಇರುವ ಜಾಗದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿಕೊಂಡಿತ್ತು. ಸುಮಾರು ರಾತ್ರಿ 8 ಗಂಟೆ ವೇಳೆಗೆ ಚಿರತೆ ಇರುವ ಮಾಹಿತಿ ದೊರಕಿತು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ, 4 ತಾಸುಗಳ ಪರಿಶ್ರಮದ ಬಳಿಕ ಚಿರತೆಯ ಪ್ರಜ್ಞೆ ತಪ್ಪಿಸಿ ಕೊಂಡೊಯ್ಯಲು ಸಫಲವಾಯಿತು ಎಂದು ಬಂಟ್ವಾಳ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಚಿರತೆ ರಕ್ಷಣೆ ಸುಮಾರು 60 ಕೆ.ಜಿ. ತೂಕದ ಈ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು. ಮಂಗಳೂರಿನಿಂದ ಡಾ. ಯಶಸ್ವಿ ಮತ್ತು ವೈದ್ಯರ ತಂಡ ಬಂದು ಇಂಜೆಕ್ಷನ್ ಕೊಟ್ಟ ಸುಮಾರು 15 ನಿಮಿಷದ ಬಳಿಕ ಅಮಲಿನಲ್ಲಿ ಚಿರತೆ ಮಲಗಿತು. ಬೋನಿಗೆ ಹಾಕಿ ಪಿಕಪ್ನಲ್ಲಿ ಚಿರತೆಯನ್ನು ವಲಯ ಕಚೇರಿಗೆ ತರಲಾಯಿತು ಎಂದು ವಲಯಾರಣ್ಯಾಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:AP Floods: ಪ್ರವಾಹಕ್ಕೆ ಆಂಧ್ರ ತತ್ತರ: ಇಲ್ಲಿಯವರೆಗೆ 17 ಮಂದಿ ಸಾವು
ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪ ವಲಯಾರಣ್ಯಾಧಿಕಾರಿ ಪ್ರೀತಮ್ ಎಸ್, ಯಶೋಧರ್, ಅರಣ್ಯರಕ್ಷಕ ಜಿತೇಶ್ ಸೇರಿದಂತೆ ಇನ್ನಿತರರು ಇದ್ದರು.