ಮಂಗಳೂರು :ಕಂಬಳದ ಕೋಣಗಳನ್ನು ಓಡಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಕಂಬಳದ ಕೆರೆಯಲ್ಲಿ ಕೋಣದಷ್ಟೇ ವೇಗದಲ್ಲಿ ಓಡಲು ಸಾಕಷ್ಟು ತ್ರಾಣ ಬೇಕಾಗುತ್ತದೆ. ಇದೀಗ ಪುರುಷ ಪ್ರಧಾನವಾದ ಕಂಬಳದಲ್ಲಿ ತಮಗೂ ಪಾಲು ಬೇಕು, ತಾವೂ ಕೆರೆಯಲ್ಲಿ ಓಡಲು ರೆಡಿ ಎಂದು ಯುವತಿಯರು ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ, ಆಸಕ್ತ ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಾಗಿದೆ.
ಕರಾವಳಿಯ ಗಂಡು ಕಲೆಯೆಂದೇ ಪ್ರಖ್ಯಾತವಾದ ಯಕ್ಷಗಾನಕ್ಕೆ ಬಹಳ ಹಿಂದೆಯೇ ಮಹಿಳೆಯರ ಪ್ರವೇಶವಾಗಿದೆ. ಇತ್ತೀಚೆಗೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರು ಕಾಣತೊಡಗಿದ್ದಾರೆ. ಅದೇ ರೀತಿ ಇದೀಗ ಕಂಬಳದತ್ತ ಮಹಿಳೆಯರ ಚಿತ್ತ ಹರಿದಿದ್ದು, ತಾವೂ ಪುರುಷರಿಗೇನು ಕಡಿಮೆಯಿಲ್ಲ ಎಂದು ಕಂಬಳ ಕೆರೆಯಲ್ಲಿ ಕೋಣಗಳನ್ನು ಓಡಿಸಲು ತಯಾರಾಗಿದ್ದಾರೆ.
ಕಳೆದ ಬಾರಿಯೇ ಬೊಳ್ಳಂಪಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರು ಕಂಬಳದ ಕೆರೆಗಿಳಿದು ಕೋಣಗಳನ್ನು ಓಡಿಸಿದ್ದಾರೆ. ಇದಕ್ಕೆ ಆಕೆಯ ತಂದೆ ಪರಮೇಶ್ವರ ಭಟ್ ಸಾಥ್ ನೀಡಿದ್ದರು. ಈ ಬಾರಿ ಐವರು ಯುವತಿಯರ ಮನೆಯವರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ತರಬೇತಿ ನೀಡಬೇಕೆಂದು ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಮುಂದೆ ಕೋರಿಕೆ ಇಟ್ಟಿದ್ದಾರೆ. ಅಕಾಡೆಮಿ ಇದಕ್ಕೆ ಸೈ ಎಂದಿದೆ.