ಮಂಗಳೂರು :ಜಿಲ್ಲೆಯಲ್ಲಿ ಇಂದು 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದರಿಂದ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.
ಐವರಲ್ಲಿ ನಾಲ್ವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ರೆ, ಓರ್ವ ಚಿಕ್ಕಮಗಳೂರು ಜಿಲ್ಲೆಯವರು. ಚಿಕ್ಕಮಗಳೂರು ಜಿಲ್ಲೆಯ 65 ವರ್ಷದ ಪುರುಷ, ಮಂಗಳೂರಿನ 55 ವರ್ಷದ ಪುರುಷ ಹಾಗೂ 63 ವರ್ಷದ ಪುರುಷ, ಬೆಳ್ತಂಗಡಿಯ 42 ವರ್ಷದ ಪುರುಷ ಮತ್ತು ಬಂಟ್ವಾಳದ ಎರಡು ತಿಂಗಳ ಮಗು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬಂಟ್ವಾಳದ ಎರಡು ತಿಂಗಳ ಮಗು ಜುಲೈ 18ರಂದು ಸಾವನ್ನಪ್ಪಿದ್ದು, ಮಗುವಿನ ಮೃತದೇಹವನ್ನು ಕೋವಿಡ್-19 ನಿಯಾಮಾವಳಿಯಂತೆ ಜುಲೈ 18ರಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಇಂದು ಮಗುವಿನ ಗಂಟಲು ದ್ರವದ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇದರಲ್ಲಿ 13 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿಂದು 89 ಮಂದಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 3,685ಕ್ಕೆ ಏರಿದೆ. ಇಂದು 57 ಸೇರಿ ಈವರೆಗೆ 1,548 ಮಂದಿ ಗುಣಮುಖರಾಗಿದ್ದಾರೆ. 2,055 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.