ಮಂಗಳೂರು:ರಾಜ್ಯಾದ್ಯಂತ ಇಂದು ಶಾಲೆಗಳು ಆರಂಭವಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಎರಡು ವಾರ ಶಾಲೆಗಳು ಆರಂಭವಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಶಾಲಾ ಆರಂಭದ ಕುರಿತಾದ ಸಭೆಯ ಬಳಿಕ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಶಾಲೆ ಆರಂಭದ ಸಾಧಕ, ಭಾಧಕ ಚರ್ಚೆ ನಡೆಸಲಾಗಿದೆ. ವೃತ್ತಿಪರ ಕಾಲೇಜು ಸೇರಲು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಹಂತಹಂತವಾಗಿ ಪಿಯುಸಿ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವಿದ್ಯಾರ್ಥಿಗಳು ಆರ್ಟಿಪಿಸಿಆರ್ ನೆಗೆಟಿವ್ ವರದಿ ತರುವುದು, ಸೋಂಕಿತರು ಕ್ವಾರಂಟೈನ್ನಲ್ಲಿದ್ದು ನೆಗೆಟಿವ್ ಬಂದ ಬಳಿಕ ತರಗತಿಗೆ ಬರಲು ಸೂಚಿಸಲಾಗಿದೆ. ಪಿಯುಸಿ ಆರಂಭದ ಬಳಿಕ ಪಾಸಿಟಿವ್ ಪ್ರಕರಣಗಳು ಬರುವುದನ್ನು ನೋಡಿಕೊಂಡು ಶಾಲೆಗಳನ್ನು ತೆರೆಯಲಾಗುವುದು. ಇನ್ನೂ ಎರಡು ವಾರ ಶಾಲೆಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಹಿಂದೆ ನಿತ್ಯ 7 ಸಾವಿರ ಟೆಸ್ಟ್ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಪಾಸಿಟಿವಿಟಿ ರೇಟ್ 4.7 ರವರೆಗೆ ಇತ್ತು. ಇದೀಗ ದಿನಂಪ್ರತಿ 11 ಸಾವಿರ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಪಾಸಿಟಿವಿಟಿ ರೇಟ್ 3.9 ಕ್ಕಿಳಿದಿದೆ. ಇದನ್ನು 15 ಸಾವಿರಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಹೆಚ್ಚು ಪ್ರಕರಣಗಳು ಪತ್ತೆಯಾದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಭಾಯಿಸಲು ಸೌಕರ್ಯಗಳು ಇದೆ ಎಂದರು.
ಕೇರಳದಿಂದ ಬಂದ ಸುಮಾರು 600 ವಿದ್ಯಾರ್ಥಿಗಳು ಆರ್ಟಿಪಿಸಿಆರ್ನಲ್ಲಿ ನೆಗೆಟಿವ್ ಇದ್ದರೂ ಬಳಿಕ ಪಾಸಿಟಿವ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕ್ವಾರಂಟೈನ್ ಗಂಭೀರವಾಗಿ ತೆಗೆದುಕೊಳ್ಳದ ಕಾಲೇಜು ಆಡಳಿತದ ಮೇಲೆ ಎಫ್ಐಆರ್ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಡಿಸಿ ಹೇಳಿದ್ದಾರೆ.