ಸುಳ್ಯ(ದಕ್ಚಿಣಕನ್ನಡ) : ಬೈಕ್ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ ಯುವಕನನ್ನು ಕೋನಡ್ಕ ನಿವಾಸಿ ಗುರುಪ್ರಸಾದ್ (21) ಎಂದು ಗುರುತಿಸಲಾಗಿದೆ.
ಘಟನೆಯ ವಿವರ : ಇಂದು ಮುಂಜಾನೆ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಎಂಬಲ್ಲಿ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಗುರುಪ್ರಸಾದ್ ಮೇಲೆ ಕಾಡಾನೆ ದಾಳಿ ಮಾಡಿದೆ. ಯುವಕನ ಮೇಲೆ ದಾಳಿಗೈದ ಆನೆ ಆತನನ್ನು ನೂರು ಮೀಟರ್‌ಗಳವರೆಗೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಕಾಡಾನೆ ಗುರುಪ್ರಸಾದ್ ಮೇಲೆ ದಾಳಿ ಮಾಡ್ತಿರೋದನ್ನಅಡಿಕೆ ಕೊಯ್ಯಲು ತೆರಳುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದು, ನಂತರ ಸ್ಥಳೀಯರು ಸೇರಿ ಕಾಡಾನೆಯನ್ನು ಸ್ಥಳದಿಂದ ಓಡಿಸಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ತೋಟಗಳ ಮೇಲೆ ಕಾಡಾನೆ ದಾಳಿ ನಡೆಯುತ್ತಲೇ ಇದ್ದು, ದಾಳಿ ತಪ್ಪಿಸಲು ಅರಣ್ಯಾಧಿಕಾರಿಗಳು ಸತತ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಆನೆ ಕಾಡು ದಾಟಿ ನಾಡಿಗೆ ಬರದಂತೆ ಹಲವು ಕಡೆಗಳಲ್ಲಿ ಕಂದಕ ತೋಡಲಾಗಿದ್ದರೂ, ಕಂದಕ ತೋಡದೇ ಬಿಟ್ಟ ಜಾಗದಲ್ಲೇ ಆನೆ ಸವಾರಿ ಮಾಡುತ್ತಿದ್ದು, ಅಲ್ಲಿಂದಲೇ ಕೊಲ್ಲಮೊಗ್ರು ಗ್ರಾಮಕ್ಕೆ ಪ್ರವೇಶಿಸಿರುವ ಶಂಕೆ ಇದೆ. ಕಳೆದ ಏಳೆಂಟು ತಿಂಗಳ ಹಿಂದೆಯೂ ಇದೇ ರೀತಿ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಆ ವೇಳೆ ಗಾಯಗೊಂಡಿದ್ದ ವೃದ್ಧ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.