ಮಂಗಳೂರು: ಕೊರೊನಾ ವೈರಸ್ ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ನಗರಗಳಲ್ಲಿರುವ ಖಾಸಗಿ ಶಾಲೆಗಳು ಆನ್ಲೈನ್ ಪಾಠದ ಮೊರೆ ಹೋಗಿದ್ದರೆ, ಸರ್ಕಾರಿ ಶಾಲೆಗಳು ಕೂಡ ಗಮನಹರಿಸಿವೆ. ಆದರೆ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠದ ಸಮಸ್ಯೆ ಎದುರಾಗುತ್ತಿದ್ದು, ಇದಕ್ಕೆ ವಿದ್ಯಾಗಮವೇ ಪರಿಹಾರವೆನ್ನುತ್ತಿದೆ ಶಿಕ್ಷಣ ಇಲಾಖೆ.
ಕೊರೊನಾ ವೈರಸ್ ವ್ಯಾಪಕಗೊಂಡ ಬಳಿಕ ಶಿಕ್ಷಣ ವ್ಯವಸ್ಥೆ ಮೇಲೆ ಕರಿನೆರಳು ಬಿದ್ದಿದೆ. ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠವನ್ನು ಆರಂಭಿಸಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠಗಳು ನಡೆದರೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಂದನವಾಹಿನಿ ಮೂಲಕ ತರಗತಿಗಳು ನಡೆಯುತ್ತಿವೆ. ಆದರೆ, ಇವೆಲ್ಲದರಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್, ಟಿವಿ ಹಾಗೂ ಮೊಬೈಲ್ ಇಲ್ಲದ ಬಡ ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ.