ಮಂಗಳೂರು/ಕೊಡಗು: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಕೆಲವು ಕಡೆ ಇಂದು ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣ, ಸಂಪಾಜೆ, ಗೂನಡ್ಕ, ಮರ್ಕಂಜ, ಆಲೆಟ್ಟಿ, ತೊಡಿಕಾನ, ಪೆರಾಜೆಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ ಗಾಮದಲ್ಲಿ ಭೂ ನಡುಗಿದ್ದು, ಮನೆಗಳು ಬಿರುಕುಬಿಟ್ಟಿವೆ.
ಸುಳ್ಯದಲ್ಲಿ 2.7 ತೀವ್ರತೆಯ ಭೂಕಂಪನ ದಾಖಲಾಗಿದೆ. ಬೆಳಗ್ಗೆ 9.12ರ ವೇಳೆಗೆ ಭೂಮಿಯ ಕಂಪನವಾಗಿದೆ. 3-4 ಸೆಕೆಂಡ್ ಶಬ್ದದೊಂದಿಗೆ ಲಘು ಕಂಪನವಾಗಿದ್ದು, ಹಲವರಲ್ಲಿ ಆತಂಕ ಮೂಡಿಸಿದೆ. 'ನಾವು ಚಿಕ್ಕವರಿದ್ದಾಗ ಒಮ್ಮೆ ಭೂಕಂಪನವಾಗಿತ್ತು. ಇದೀಗ ಮತ್ತೊಮ್ಮೆ ಲಘುವಾಗಿ ಭೂಮಿ ಕಂಪಿಸಿದೆ' ಎಂದು ಸುಳ್ಯದ ಸ್ಥಳೀಯರು ತಿಳಿಸಿದ್ದಾರೆ.
(ಇದನ್ನೂ ಓದಿ:ವಿಜಯಪುರದಲ್ಲಿ ಮತ್ತೆ ಭೂಕಂಪನ.. ಆತಂಕದಲ್ಲಿ ಜನ)
ಸುಳ್ಯದಲ್ಲಿ ಪಾತ್ರೆಗಳು ಕೆಳಕ್ಕೆ ಬಿದ್ದಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯ ಡಬ್ಬಿ ಶೀಟ್‌ಗಳು, ಅಂಗಡಿಯಲ್ಲಿದ್ದ ಭರಣಿಗಳು ಅದುರಿದ ಅನುಭವವಾಗಿದೆ. ಸುಳ್ಯದ ತೋಡಿಕಾನದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಮರ ಅದುರಿದ ಅನುಭವವಾಯಿತೆಂದು ಹೇಳಲಾಗಿದೆ. ಬೀರಮಂಗಲ ಕಡೆಗಳಲ್ಲಿ ಗುಡುಗಿನ ಶಬ್ದದ ತರಹ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಡುಗಿದ ಭೂಮಿ:ಕೊಡಗು ಜಿಲ್ಲೆಯ ಸಂಪಾಜೆ ಗಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9ರ ಸುಮಾರಿಗೆ 4 ರಿಂದ 5 ಸೆಕೆಂಡ್ಗಳ ಕಾಲ ಭೂಮಿ ನಡುಗಿದೆ. ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಶಬ್ದ ಬರುತ್ತಿದಂತೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸಂಪಾಜೆ ಗ್ರಾಪಂ ಸದಸ್ಯ ಅಬುಶಾಲಿ ಮನೆ ಬಿರುಕು ಕಾಣಿಸಿಕೊಂಡಿದೆ.