ಮಂಗಳೂರು: ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಕರ್ ಫರ್ನಾಂಡಿಸ್: ಆರೋಗ್ಯ ವಿಚಾರಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಯೆನೆಪೊಯ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಧರ್ಮಸ್ಥಳ ಮಂಜುನಾಥೇಶ್ವರ ಪ್ರಸಾದವನ್ನು ಆಸ್ಕರ್ ಅವರಿಗೆ ನೀಡಿ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದರು. ಬಳಿಕ ಕುಟುಂಬ ವರ್ಗದವರು ಮತ್ತು ವೈದ್ಯರೊಂದಿಗೆ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಕರ್ ಫರ್ನಾಂಡಿಸ್ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರಿಗೆ ಆಪ್ತರಾಗಿದ್ದರು. ರಾಜ್ಯಕ್ಕೆ ಬಹಳಷ್ಟು ಸೇವೆ ಮಾಡಿದ್ದಾರೆ. ಅವರಿಗೆ ಮಂಜುನಾಥ ದೇವರ ಪ್ರಸಾದ ಹಾಕಿ, ಶುಭಹಾರೈಸಿ ಬಂದಿದ್ದೇನೆ.
ವೈದ್ಯರ ವರದಿ ಪ್ರಕಾರ, ಅವರ ಮೆದುಳು ಇನ್ನೂ ಚುರುಕಾಗಿದೆ. ಪಕ್ಷಾತೀತವಾಗಿ ಕರ್ನಾಟಕ ಹಾಗೂ ತುಳುನಾಡಿನ ಜನತೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ಆಸ್ಕರ್ ಅವರು ಆರೋಗ್ಯವಾಗಿ ಬಂದು ಹಲವು ವರ್ಷಗಳ ಕಾಲ ಜನರ ಸೇವೆ ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಇದನ್ನೂ ಓದಿ:ಸಿಎಂ ಯಡಿಯೂರಪ್ಪ ಬೆನ್ನಿಗೆ ಸ್ವಪಕ್ಷದವರೇ ಚೂರಿ ಹಾಕಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್