ಮಂಗಳೂರು: ಯಾವುದೇ ಜ್ವರ ಕಾಣಿಸಿಕೊಂಡರೂ ಜನಸಾಮಾನ್ಯರು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ನಾಟಿ ಔಷಧಿಗಳ ಮೊರೆಹೋಗದಿರಿ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಸಲಹೆ ನೀಡಿದರು.
ಸಾಮಾನ್ಯ ಶೀತ ಜ್ವರ ಬಂದಲ್ಲಿ ಕೋವಿಡ್ ಅಥವಾ ಇತರ ಜ್ವರವೇ ಎಂದು ಪತ್ತೆ ಹಚ್ಚಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮಳೆಗಾಲದಲ್ಲಿ ಮುಖ್ಯವಾಗಿ ಡೆಂಗ್ಯೂ, ಮಲೇರಿಯಾ ಹಾಗೂ ಇಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಕಳೆದ ಬಾರಿಯಾದ ಕಾಯಿಲೆಗಳ ಕಹಿ ಅನುಭವದಿಂದ ಈ ಬಾರಿ ಏಪ್ರಿಲ್ನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ನಾಲ್ಕು ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ನಾಲ್ಕು ಕಾರ್ಯಾಚರಣೆಗಳು:
- ಜ್ವರ ಕಾಣಿಸಿಕೊಂಡರೆ ಕೋವಿಡ್ ಅಥವಾ ಇತರೆ ಜ್ವರವೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಅದಾದ ಬಳಿಕ ಡೆಂಗ್ಯೂ, ಮಲೇರಿಯಾ ಹಾಗೂ ಇಲಿ ಜ್ವರವೇ ಎಂದು ಲ್ಯಾಬ್ಗಳಲ್ಲಿ ತಪಾಸಣೆ ಮಾಡಲಾಗುತ್ತದೆ.
- ಆಶಾ ಕಾರ್ಯಕರ್ತೆಯರು ಕೋವಿಡ್ ಕೆಲಸಕ್ಕಾಗಿ ಮನೆ ಮನೆಗೆ ಭೇಟಿ ನೀಡುವ ಸಂದರ್ಭ ಸೊಳ್ಳೆ ಉತ್ಪತ್ತಿ ತಾಣವನ್ನು ಮನೆಯವರಿಗೆ ತೋರಿಸಿ ಸರಿಪಡಿಸುವ ಕಾರ್ಯ ಮಾಡಲಾಗುತ್ತದೆ. ನೀರು ನಿಲ್ಲುವ ಜಾಗಗಳ ಬಗ್ಗೆಯೂ ನಿಗಾ ಇರಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತದೆ.
- ಈ ಜ್ವರಗಳ ಪ್ರಕರಣಗಳಲ್ಲಿ ಕೊರೊನಾ ಪತ್ತೆಯಾದರೆ 48 ಗಂಟೆಗಳಲ್ಲಿ ಫಾಗಿಂಗ್ ಮಾಡಲಾಗುತ್ತದೆ. ಇದು ಸೊಳ್ಳೆ ಉತ್ಪತ್ತಿಯಾಗುವುದನ್ನು ನಾಶ ಮಾಡುತ್ತದೆ.
- ಮಾಹಿತಿ ಸಂಪರ್ಕ ಶಿಕ್ಷಣವನ್ನು ಮಾಡಲಾಗುತ್ತಿದೆ.
ಪುತ್ತೂರು (100ಕ್ಕೂ ಅಧಿಕ) ಹಾಗೂ ಬೆಳ್ತಂಗಡಿಯಲ್ಲಿ 30 ರಿಂದ 40 ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮನೆಯ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಡಾ. ರಾಮಚಂದ್ರ ತಿಳಿಸಿದರು.