ಮಂಗಳೂರು: ಅಡಿಕೆ (Arecanut) ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Jharkhand MP Nishikant Dubey) ನೀಡಿರುವ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಜನರಿಗೆ ತಪ್ಪು ಸಂದೇಶ ನೀಡುತ್ತದೆ. ಮಾತ್ರವಲ್ಲದೇ, ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ (CAMPCO) ಹೇಳಿದೆ.
ಅಡಿಕೆ ಮಾನವ ಹಾಗು ಜಾನುವಾರುಗಳಿಗೆ ಅಗತ್ಯವಿರುವ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ. ಅಲ್ಲದೇ ಅಡಿಕೆಯಲ್ಲಿ ಮಧುಮೇಹ, ಕೊಲೆಸ್ಟ್ರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೊಟೊಜೋವನ್ ಪರಾವಲಂಬಿ ಇತ್ಯಾದಿಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.
ಮಾರಕ ರೋಗ ಹೆಚ್‌ಐವಿ (HIV) ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಆ್ಯಂಟಿ ಮಲೇರಿಯಲ್ (Anti-malarial), ಆಂಥೆಲ್ಮಿಂಟಿಕ್ (Anthelmintic) ಗುಣಲಕ್ಷಣಗಳನ್ನೂ ಸಹ ಹೊಂದಿದೆ. ಇದು ನೋವು ಶಮನಕಾರಿ ಹಾಗು ಗಾಯ ಮತ್ತು ಹುಣ್ಣುಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಜತೆಗೆ ಉತ್ತಮ ಆ್ಯಂಟಿ- ವೆನಮ್ (Anti- Venom) ಗುಣಲಕ್ಷಣಗಳನ್ನು ಹೊಂದಿದೆ.