ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಧರ್ಮಪತ್ನಿ ಹೇಮಾವತಿ ವಿ.ಹೆಗ್ಗಡೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನಾಟಕ ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ತಿಳಿಸಿದರು.
ಮಂಗಳೂರಿನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೇಮಾವತಿ ವಿ.ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಮಹಿಳೆಯರ ಸಶಕ್ತೀಕರಣಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಹರಿಕೃಷ್ಣ ಪುನರೂರು ಅವರು ಮಾಡಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ದೇವದಾಸ್ ಕಾಪಿಕಾಡ್ ಅವರಿಗೆ ತುಳು ನಾಟಕ ಮತ್ತು ಸಿನಿಮಾದಲ್ಲಿ ಮಾಡಿದ ಸಾಧನೆಗಾಗಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಡಿ.ಶಿವಾನಂದ ನಾಯ್ಕ್ ಅವರಿಗೆ ಟೈಪೋ 2 ಡಯಾಬಿಟಿಸ್ ಮತ್ತು ಕಾರ್ಡಿಯೋಡಿಸಿಸ್ ಮಹಾಪ್ರಬಂಧಕ್ಕೆ ಡಿಎಸ್ಸಿ ಡಾಕ್ಟರೇಟ್ ನೀಡಲಾಗುತ್ತಿದೆಯೆಂದು ತಿಳಿಸಿದರು.
ದೇವದಾಸ್ ಕಾಪಿಕಾಡ್, ಹರಿಕೃಷ್ಣ ಪುನರೂರು ಎಪ್ರಿಲ್ 23 ರಂದು ನಡೆಯುವ ಮಂಗಳೂರು ವಿಶ್ವವಿದ್ಯಾನಿಲಯದ 40ನೇ ಘಟಿಕೋತ್ಸವದಲ್ಲಿ ಇದೇ ಮೊದಲ ಬಾರಿಗೆ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿರುವ ಕರ್ನಾಟಕ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾಗಿರುವ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎಸ್.ಅಬ್ದುಲ್ ನಝೀರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.
ಇದನ್ನೂ ಓದಿ:ಯಾವಾಗ್ಲೂ ಫೋನ್ನಲ್ಲೇ ಮಾತಾಡ್ತಾಳೆ ಎಂದು ಪತ್ನಿ ಹಂತಕನ ಬಂಧನ
ಈ ಸಂದರ್ಭದಲ್ಲಿ ಮಾತನಾಡಿದ ಕುಲಸಚಿವ (ಪರೀಕ್ಷಾಂಗ) ಪ್ರೊ.ಪಿ.ಎಲ್.ಧರ್ಮ, ಈ ಬಾರಿ 153 ಮಂದಿ ಡಾಕ್ಟರೇಟ್ ಪಡೆಯಲಿದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದ 3 ವಿದ್ಯಾರ್ಥಿಗಳು, ಘಾನ, ಇಂಡೋನೇಷ್ಯಾ, ಇರಾನ್ ನ ತಲಾ ಓರ್ವರು, ಇಥಿಯೋಪಿಯಾದ ಎರಡು ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ ಎಂದರು. 52 ಮಂದಿ ವಿದ್ಯಾರ್ಥಿಗಳು ಗೋಲ್ಡ್ ಮೆಡಲ್ ಪಡೆಯಲಿದ್ದಾರೆ. ಇದರಲ್ಲಿ ಅನ್ವಿತ್ ಎಂಬ ಅಂಧ ವಿದ್ಯಾರ್ಥಿ ಗೋಲ್ಡ್ ಮೆಡಲ್ ಪಡೆದಿರುವುದು ವಿಶೇಷ. ಈ ವಿದ್ಯಾರ್ಥಿ ಪೊಲಿಟಿಕಲ್ ಸೈನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.