ಮಂಗಳೂರು:ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ ಗ್ರಾಮ ಹಾಗೂ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿತ್ತು. ಇಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆ ಗ್ರಾಮಗಳನ್ನು ಸೀಲ್ ಡೌನ್ ಮುಕ್ತಗೊಳಿಸಿದ್ದಾರೆ.
ದ.ಕ ಜಿಲ್ಲೆಯ ತುಂಬೆ, ಸಂಪ್ಯ ಗ್ರಾಮಗಳು ಸೀಲ್ ಡೌನ್ನಿಂದ ಮುಕ್ತ ಕೋವಿಡ್-19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಇಂದು 28 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 75 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಆದ್ದರಿಂದ ಇಂದು ಒಂದೂ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಅಲ್ಲದೆ 330 ಮಂದಿಯ ವರದಿ ಬರಬೇಕಾಗಿದೆ. ಒಟ್ಟು 11 ಮಂದಿ ಅಬ್ಸರ್ವೇಷನ್ನಲ್ಲಿದ್ದಾರೆ.
40 ಮಂದಿಯನ್ನು ಮಂಗಳೂರಿನ ಇಎಸ್ಐ ಹಾಸ್ಪಿಟಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, 33 ಮಂದಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯ ಕ್ವಾರೆಂಟೈನ್ನಲ್ಲಿ ಯಾರೂ ಇಲ್ಲ. 6,073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಇಂದು 49 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಮಂಗಳೂರಲ್ಲಿ ಈವರೆಗೆ 40,206 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ.
ಈವರೆಗೆ 3,683 ಮಂದಿಯ ಗಂಟಲು ದ್ರವ ಪಡೆಯಲಾಗಿದ್ದು, ಈವರೆಗೆ 3,278 ಮಂದಿಯ ವರದಿ ಬಂದಿದೆ. ಅದರಲ್ಲಿ 3,254 ಮಂದಿಯ ವರದಿ ನೆಗೆಟಿವ್ ಬಂದಿವೆ. 24 ಮಂದಿಯಲ್ಲಿ ಸೋಂಕು ದೃಢಗೊಂಡಿದ್ದು, 12 ಮಂದಿ ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 9 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.