ಮಂಗಳೂರು: ಈಶ್ವರಪ್ಪ ಮುಖ್ಯಮಂತ್ರಿಗಳ ವಿರುದ್ಧ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಈಶ್ವರಪ್ಪ ಅವರನ್ನು ಇಂದು ಸಾಯಂಕಾಲದ ಒಳಗೆ ಸಚಿವ ಸ್ಥಾನದಿಂದ ಉಚ್ಛಾಟಿಸಲಿ ಅಥವಾ ತಾವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಕೇರಳದ ಚುನಾವಣಾ ಪ್ರಚಾರಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಬರೆದಿರುವುದು ಕೇವಲ ಪತ್ರ ಅಲ್ಲ, ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸಿದ್ದಾರೆ. ಈಶ್ವರಪ್ಪ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರಿಗೆ ಪತ್ರ ಬರೆದು ಸಿಎಂ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದ್ದು, ಸಚಿವರಿಗೆ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ ಎಂದು ಹೇಳಿದರು.
ಈವರೆಗೆ ಯಾವೊಬ್ಬ ಸಚಿವರು ಸಿಎಂ ಆಡಳಿತದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ಈಶ್ವರಪ್ಪ ಈಗ ಮಾಡಿದ್ದಾರೆ. ಇದು ರಾಜ್ಯದ ಆಡಳಿತ ವಿಚಾರ. ಆಡಳಿತದ ಬಗ್ಗೆ ದೇಶಕ್ಕೆ ಪಾಠ ಹೇಳುತ್ತಿದ್ದವರು ಇದನ್ನು ತೋರಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಇವತ್ತು ಸಾಯಾಂಕಾಲದ ಒಳಗೆ ಈಶ್ವರಪ್ಪ ಅವರನ್ನು ಉಚ್ಛಾಟಿಸಲಿ ಎಂದರು.