ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಇಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಸಿದ್ಧತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಿಂಧೂ ಬಿ. ರೂಪೇಶ್ ಭೇಟಿ ದೇವಸ್ಥಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಿದ್ಧತಾ ಕಾರ್ಯದ ಕುರಿತು ಮಾಹಿತಿ ಪಡೆದು ನಂತರ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಬಳಿಕ ಮಾತನಾಡಿದ ಅವರು, ಚಂಪಾ ಷಷ್ಠಿ ಮಹೋತ್ಸವದ ಯಶಸ್ಸಿಗೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ಬಾರಿಗಿಂತ ಈ ಸಲ ಹೆಚ್ಚುವರಿಯಾಗಿ 200 ಪೊಲೀಸರನ್ನು ನಿಯೋಜನೆ ಮಾಡಲು ಸೂಚಿಸಲಾಗಿದೆ ಎಂದರು.
ಇನ್ನು ಜಾತ್ರಾ ಉತ್ಸವಕ್ಕೆ ಬರುವಂತಹ ವಾಹನಗಳನ್ನು ಸೂಕ್ತ ಪಾರ್ಕಿಂಗ್ ಮಾಡಲು ಹಲವು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಬಸ್ಗಳಿಗೆ ಕುಮಾರಧಾರಾ ಮತ್ತು ಇಂಜಾಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕುಮಾರಧಾರಾದಿಂದ ಕಾಶಿಕಟ್ಟೆಯವರೆಗೆ ಉಚಿತವಾಗಿ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ರೂಪಾ, ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಪೇರಾಲು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.