ಮಂಗಳೂರು:ಬಿಜೆಪಿಯವರಿಗೆ ಪ್ರಣಾಳಿಕೆಯೇ ಬೇಕಾಗಿಲ್ಲ. ಅಲ್ಲದೆ ಅದನ್ನು ಉಳಿಸಿಕೊಳ್ಳಬೇಕೆಂಬ ಇರಾದೆಯೂ ಇಲ್ಲ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ನಿಲುವು ಏನು ಎಂಬುದೇ ತಿಳಿದು ಬರುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ: ದಿನೇಶ್ ಗುಂಡೂರಾವ್ - ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಪ್ರಣಾಳಿಕೆ
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಪ್ರಣಾಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಮಂಗಳೂರು ಜನತೆಯ ಆಶೀರ್ವಾದದಿಂದ ಆಯ್ಕೆಯಾದ ಇಲ್ಲಿನ ಶಾಸಕರು, ಮಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಆದ್ದರಿಂದ ಹೆಚ್ಚಿನ ಅನುದಾನವನ್ನು ಸಿದ್ದರಾಮಯ್ಯನವರು ಅವರ ಅವಧಿಯಲ್ಲಿ ಇಲ್ಲಿಗೆ ನೀಡಿದ್ದರು. ಇಷ್ಟೊಂದು ಅಭಿವೃದ್ಧಿ ಕೆಲಸಗಳು ಬೇರೆ ಯಾವ ಅವಧಿಯಲ್ಲಿಯೂ ಆಗಿಲ್ಲ ಎಂದರು.
ಜನರಿಗೆ ಯಾವ ಕೆಲಸಗಳು ಆಗಬೇಕೆಂದು ಇತ್ತೋ, ಅದೆಲ್ಲವನ್ನೂ ಸಿದ್ದರಾಮಯ್ಯ ಸರ್ಕಾರ ನಡೆಸಿ, 1,400 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಆದ್ದರಿಂದ ಜನ ಏನು ಅಪೇಕ್ಷೆ ಪಟ್ಟಿದ್ದಾರೋ, ಅದೇ ಪ್ರಕಾರ ನಾವು ಕೆಲಸ ಮಾಡಿದ್ದೇವೆ. ಈ ಹಿಂದೆ ಐದು ಬಾರಿ ಕಾಂಗ್ರೆಸ್ ಪಕ್ಷ ಮಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದಿತ್ತು. ಒಂದು ಬಾರಿ ಮಾತ್ರ ಕೈತಪ್ಪಿತ್ತು. ಆದ್ದರಿಂದ ಈ ಚುನಾವಣೆಯಲ್ಲಿಯೂ ನಾವೇ ಮನಪಾ ಆಡಳಿತ ವಹಿಸಿಕೊಳ್ಳಲಿದ್ದೇವೆ ಎಂದು ವಿಶ್ವಾಸವಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.