ಮಂಗಳೂರು :ಈ ಕಾಲಘಟ್ಟದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳಾಗಿವೆ. ಕೋವಿಡ್ ಲಾಕ್ಡೌನ್ನಿಂದ ಕುಟುಂಬದ ಎಲ್ಲಾ ಸದಸ್ಯರು ತಿಂಗಳುಗಳ ಕಾಲ ಮನೆಯಲ್ಲಿದ್ದ ಪರಿಣಾಮ ಪತಿ-ಪತ್ನಿಯರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಲು ಸೂಕ್ತ ಅವಕಾಶ ಸಿಕ್ಕಿದಂತಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಆರ್ ಸೆಲ್ವಮಣಿ ಹೇಳಿದರು.
ದ ಕ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ಸಾಂತ್ವನ ಕೇಂದ್ರ ಹಾಗೂ ವರದಕ್ಷಿಣೆ ನಿಷೇಧ ಜಿಲ್ಲಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂತ್ವನ ಕೇಂದ್ರವು ನೊಂದ ಮಹಿಳೆಯರು ತಮ್ಮ ಸಮಸ್ಯೆ ಹೇಳಿಕೊಳ್ಳುವ ಒಂದು ವೇದಿಕೆಯಾಗಿದೆ. ಬಡವರು ಶ್ರೀಮಂತರು ಎನ್ನುವ ಭೇದ-ಭಾವವಿಲ್ಲದೇ ಎಲ್ಲರೂ ತಮ್ಮ ಕೌಟುಂಬಿಕ ಸಮಸ್ಯೆಗಳಿಗೆ ಸಾಂತ್ವನ ಕೇಂದ್ರದಲ್ಲಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ. ಸಾಂತ್ವನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಬಾಕಿಯಿದ್ದು, ವೇತನ ಬಿಡುಗಡೆ ಮಾಡುವಂತೆ ಉನ್ನತ ಅಧಿಕಾರಿಗಳಿಗೆ ಮನವಿ ನೀಡಲಾಗುವುದು ಎಂದರು.